ಸೋಮವಾರಪೇಟೆ, ಜು. ೨೭ : ಬಾಡಿಗೆಗಿದ್ದ ಮನೆಯಲ್ಲಿಯೇ ವಿಷ ಸೇವಿಸಿ ನವ ವಿವಾಹಿತರೋರ್ವರು ಆತ್ಮಹತ್ಯೆಗೆ ಶರಣಾಗಿದ್ದು, ಪತ್ನಿಯೂ ಬೇಕಾಬಿಟ್ಟಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಟ್ಟಣದ ಮಾನಸ ಹಾಲ್ ಹಿಂಭಾಗದ ಬಡಾವಣೆಯಲ್ಲಿ ನಡೆದಿದೆ.

ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮನೆಕೊಪ್ಪ ನಿವಾಸಿ ಕಾಳಪ್ಪ ಹಾಗೂ ಶೈಲಾ ದಂಪತಿ ಪುತ್ರ ಭಾನುಪ್ರಕಾಶ್ (೩೭) ಎಂಬವರೇ ನೇಣಿಗೆ ಶರಣಾಗಿ ಇಹಲೋಕ ತ್ಯಜಿಸಿದ ದುರ್ದೈವಿ. ಇವರ ಪತ್ನಿ ಚಾಮರಾಜನಗರದ ಮಂಜುಳಾ ಹಾಗೂ ಕೃಷ್ಣ ದಂಪತಿ ಪುತ್ರಿ ಕಾವ್ಯ(೨೭) ಮಾತ್ರೆಗಳನ್ನು ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾನುಪ್ರಕಾಶ್ ಮತ್ತು ಕಾವ್ಯ ಅವರುಗಳು ಪ್ರೀತಿಸಿ, ಪೋಷಕರ ಒಪ್ಪಿಗೆಯೊಂದಿಗೆ ಕಳೆದ ಮಾರ್ಚ್ನಲ್ಲಿ ವಿವಾಹವಾಗಿದ್ದು,

(ಮೊದಲ ಪುಟದಿಂದ) ನಂತರ ಪಟ್ಟಣದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಕಾವ್ಯ, ವಿವಾಹ ನಂತರ ಸೋಮವಾರಪೇಟೆಗೆ ಆಗಮಿಸಿ ‘ವರ್ಕ್ ಫ್ರಂ ಹೋಂ’ ಕೆಲಸ ಮಾಡುತ್ತಿದ್ದರು.

ಟಿಂಬರ್ ಸೇರಿದಂತೆ ಇನ್ನಿತರ ವ್ಯಾಪಾರ ನಡೆಸುತ್ತಿದ್ದ ಭಾನುಪ್ರಕಾಶ್, ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿಯೇ ಇದ್ದರು. ವಿವಾಹದ ನಂತರ ಪತಿ-ಪತ್ನಿಯರ ನಡುವೆ ಆಗಾಗ್ಗೆ ಭಿನ್ನಾಭಿಪ್ರಾಯಗಳು ಮೂಡುತ್ತಿದ್ದು, ಸಣ್ಣಪುಟ್ಟ ಮನಸ್ತಾಪಗಳಾದಾಗ ಹಿರಿಯರು ತಿಳಿ ಹೇಳುತ್ತಿದ್ದರು.

ನಿನ್ನೆ ದಿನವೂ ಸಹ ಪೋಷಕರು ಆಗಮಿಸಿ ದಂಪತಿಯೊAದಿಗೆ ಮಾತುಕತೆ ನಡೆಸಿ ತೆರಳಿದ್ದು, ನಂತರ ಮನೆಯಲ್ಲಿ ಕಲಹ ನಡೆದಿದೆ. ಈ ಸಂದರ್ಭ ಪತ್ನಿ ಕಾವ್ಯ ಆತ್ಮಹತ್ಯೆಗೆ ಮುಂದಾಗಿದ್ದಾರೆ. ತಕ್ಷಣ ಭಾನುಪ್ರಕಾಶ್ ಹಗ್ಗವನ್ನು ಕತ್ತರಿಸಿದ್ದು, ಈ ಸಂದರ್ಭ ಕೈಗೆ ಸಣ್ಣ ಗಾಯವಾಗಿದೆ. ಇದಾದ ಕೆಲ ಸಮಯದಲ್ಲೇ ಭಾನುಪ್ರಕಾಶ್ ಅದೇ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾರೆ ಎಂದು ಮೃತನ ಸಂಬAಧಿಕರು ತಿಳಿಸಿದ್ದಾರೆ.

ಘಟನೆ ನಂತರ ಮನೆಯಲ್ಲಿದ್ದ ಮಾತ್ರೆಗಳನ್ನು ಕಾವ್ಯ ಸೇವಿಸಿದ್ದು, ಒಮ್ಮೆಲೆ ಮಾನಸಿಕ ಸ್ಥಿಮಿತ ಕಳೆದುಕೊಂಡAತಾಗಿ ರಸ್ತೆಯಲ್ಲಿ ಓಡಾಡಲು ಆರಂಭಿಸಿದ್ದಾರೆ. ರಸ್ತೆ ಬದಿಯಲ್ಲಿದ್ದ ಕಾರಿನ ಡೋರ್‌ಗಳನ್ನು ತೆಗೆಯಲು ಯತ್ನಿಸುತ್ತಿದ್ದ ಸಂದರ್ಭ ಸ್ಥಳೀಯರು ಗಮನಿಸಿ ಪೊಲೀಸ್ ಇಲಾಖೆಯ ೧೧೨ಗೆ ಕರೆ ಮಾಡಿದ್ದಾರೆ.

ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಕಾವ್ಯ ಅವರನ್ನು ಆಟೋವೊಂದರಲ್ಲಿ ಆಸ್ಪತ್ರೆಗೆ ದಾಖಲಿಸಿ, ಹೇಳಿಕೆ ಪಡೆಯಲು ಮುಂದಾದ ಸಂದರ್ಭ ಇತ್ತ ಮನೆಯಲ್ಲಿ ಭಾನುಪ್ರಕಾಶ್ ನೇಣಿಗೆ ಶರಣಾಗಿರುವ ವಿಷಯ ತಿಳಿದುಬಂದಿದೆ. ಪೊಲೀಸ್ ಅಧಿಕಾರಿಗಳು ಮನೆಗೆ ಆಗಮಿಸಿ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಾತ್ರೆಗಳನ್ನು ಸೇವಿಸಿ ತೀವ್ರ ಅಸ್ವಸ್ಥಗೊಂಡ ಕಾವ್ಯ ಅವರನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ನೀಡಲಾಗಿದೆ ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.

ಮೃತ ಭಾನುಪ್ರಕಾಶ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಿದ್ದು, ದೊಡ್ಡಮನೆಕೊಪ್ಪದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಆಸ್ಪತ್ರೆಯಿಂದ ಆಂಬ್ಯುಲೆನ್ಸ್ನಲ್ಲೇ ಆಗಮಿಸಿದ ಪತ್ನಿ ಕಾವ್ಯ ಅವರ ಸಮ್ಮುಖದಲ್ಲಿ ಸಂಜೆ ವೇಳೆಗೆ ವಿಧಿವಿಧಾನ ನೆರವೇರಿಸಲಾಯಿತು. ಘಟನೆಯ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಠಾಣಾಧಿಕಾರಿ ರಮೇಶ್‌ಕುಮಾರ್ ಅವರು ತನಿಖೆ ನಡೆಸುತ್ತಿದ್ದಾರೆ.