ಕುಶಾಲನಗರ, ಜು. ೨೬: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘವು ೨೦೨೨-೨೩ನೇ ಸಾಲಿನಲ್ಲಿ ಉತ್ತಮ ವಾಹಿವಾಟು ನಡೆಸಿ ರೂ.೨.೦೬ ಕೋಟಿ ನಿವ್ವಳ ಲಾಭಗಳಿಸುವ ಮೂಲಕ ಕಳೆದ ೧೯ ವರ್ಷಗಳಿಂದ ಸತತ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಹೇಳಿದರು. ಬೈಪಾಸ್ ರಸ್ತೆಯಲ್ಲಿರುವ ಸಂಘದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರಸಕ್ತ ಸಾಲಿನಲ್ಲಿ ಸಂಘವು ರೂ. ೩೧೯.೭೬ ಕೋಟಿ ವಾರ್ಷಿಕ ವ್ಯವಹಾರ ನಡೆಸಿದ್ದು,ಅನುತ್ಪಾದಕ ಆಸ್ತಿಗಳಿಗೆ ರೂ ೩೭.೪೭ ಲಕ್ಷ, ಆದಾಯ ತೆರಿಗೆಗಳಿಗೆ ರೂ ೧೯.೫೯. ಲಕ್ಷ ಹಾಗೂ ಕಟ್ಟಡ ಮತ್ತು ಇತರ ಸವಕಳಿಗೆ ರೂ ೧೨.೪೩ ಲಕ್ಷಗಳನ್ನು ಕಾಯ್ದಿರಿಸಿ ರೂ ೨.೦೬ ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿರುವುದಾಗಿ ತಿಳಿಸಿದರು.

ಸಂಘವು ಕಳೆದ ೨೦೨೨-೨೦೨೩ನೇ ಸಾಲಿನಲ್ಲಿ ೧,೩೦೫ ಸದಸ್ಯರಿಂದ ರೂ.೩.೪೫ ಕೋಟಿಗಳ ಪಾಲು ಬಂಡವಾಳ ಸಂಗ್ರಹಿಸಿದೆ. ಸಂಘದ ಕಾರ್ಯ ವ್ಯಾಪ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರ ಅಭ್ಯುದಯಕ್ಕಾಗಿ ಅವರುಗಳು ಸಣ್ಣಪುಟ್ಟ ವ್ಯಾಪಾರ ವಹಿವಾಟುಗಳನ್ನು ಮಾಡಲು ಹಾಗೂ ತಮ್ಮ ಮಕ್ಕಳ ವಿದ್ಯಾಭ್ಯಾಸದ ವೆಚ್ಚಕ್ಕಾಗಿ ತಮ್ಮ ಕುಟುಂಬದ ಚಿಕಿತ್ಸೆ ವೆಚ್ಚಕ್ಕಾಗಿ ಸಹಾಯವಾಗುವ ರೀತಿಯಲ್ಲಿ ಮಹಿಳಾ ಚೇತನಾ ಸ್ವಸಹಾಯ ಗುಂಪು ಸಾಲ ಯೋಜನೆ ಪ್ರಾರಂಭಿಸಿ ಮಹಿಳೆಯರಿಗೆ ಸಾಲ ವಿತರಣೆ ಮಾಡಲಾಗುತ್ತಿದೆ. ೨೦೨೩ ರ ಮಾರ್ಚ್ ಅಂತ್ಯಕ್ಕೆ ಸಂಘದಿAದ ೨೬೩ ಗುಂಪುಗಳ ೨೪೫೫ ರಷ್ಟು ಮಹಿಳೆಯರಿಗೆ ಒಟ್ಟು ೧೨.೮೨ ಕೋಟಿಗಳಷ್ಟು ಸಾಲ ವಿತರಿಸಲಾಗಿದೆ ಎಂದರು.

ಸAಘದ 'ಎ' ತರಗತಿ ಸದಸ್ಯರುಗಳು ತಮ್ಮ ಸ್ವಂತ ಕಟ್ಟಡದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು ಉತ್ತಮ ವ್ಯವಹಾರವನ್ನು ನಡೆಸುತ್ತಿರುವವರಿಗೆ ಹಾಲಿ ಸಂಘದಲ್ಲಿ ಸದಸ್ಯರ ಅನುಕೂಲಕ್ಕಾಗಿ ಪ್ರತಿಯೊಬ್ಬ ಸದಸ್ಯರಿಗೆ ವೈಯಕ್ತಿಕ ಜಾಮೀನಿನ ಆಧಾರದ ಮೇಲೆ ವ್ಯಾಪಾರಾಭಿವೃದ್ಧಿ ಮಾಸಿಕ ಕಂತಿನ ಸಾಲ ರೂ.೫೦ ಸಾವಿರದಿಂದ ೨.೧೦ ಕೋಟಿ ಗಳಷ್ಟು ಸಾಲ ನೀಡಲಾಗುತ್ತಿದೆ.

ಅದರಲ್ಲಿ ರೂ.೨ ಕೋಟಿ ಭದ್ರತಾ ಸಾಲವಾಗಿದ್ದು, ರೂ.೧೦ ಲಕ್ಷ ಅಭದ್ರತಾ ಸಾಲವಾಗಿರುತ್ತದೆ ಎಂದರು. ಸಂಘದ ಮಹೋನ್ನತ ಕಾರ್ಯಕ್ರಮ ವನಸಿರಿ ಯೋಜನೆಗೆ ಈಗಾಗಲೇ ಚಾಲನೆ ನೀಡುವ ಮೂಲಕ ಹಸಿರೀಕರಣಕ್ಕೆ ಆದ್ಯತೆ ನೀಡಲಾಗಿದೆ.

ಸದಸ್ಯರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ಸಾಲವನ್ನು ಪ್ರಾರಂಭಿಸಿದ್ದು, ದೇಶದ ಒಳಗೆ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಗರಿಷ್ಠ ರೂ.೨೦ ಲಕ್ಷಗಳಂತೆ, ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಮಾಡುವ ವಿದ್ಯಾರ್ಥಿಗಳಿಗೆ ಗರಿಷ್ಠ ರೂ.೫೦ ಲಕ್ಷಗಳವರೆಗೆ ಶೈಕ್ಷಣಿಕ ಸಾಲವನ್ನು ನೀಡಲಾಗುತ್ತಿದೆ.

೨೦೨೨-೨೩ನೇ ಸಾಲಿನಲ್ಲಿ ಲಾಭ ವಿಲೇವಾರಿಯಲ್ಲಿ ಸದಸ್ಯರಿಗೆ ಶೇ.೨೨ ರಷ್ಟು ಡಿವಿಡೆಂಡ್ ನೀಡಲು ತೀರ್ಮಾನಿಸಿರುತ್ತೇವೆ ಸದಸ್ಯರು ಸಹಕರಿಸಬೇಕೆಂದು ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಮನವಿ ಮಾಡಿತು.

ಸಂಘದ ೨೦೨೨-೨೩ ನೇ ಸಾಲಿನ ವಾರ್ಷಿಕ ಮಹಾಸಭೆಯು ಜು.೩೦ ರಂದು ಭಾನುವಾರ ಪೂರ್ವಾಹ್ನ ೧೧.೦೦ ಗಂಟೆಗೆ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಸದಸ್ಯರು ಕಡ್ಡಾಯವಾಗಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಅಧ್ಯಕ್ಷ ಶರವಣಕುಮಾರ್ ಮನವಿ ಮಾಡಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಂ.ಎA.ಶಾಹೀರ್, ನಿರ್ದೇಶಕರಾದ ಎನ್.ಇ. ಶಿವಪ್ರಕಾಶ್, ಕೆ.ಎಸ್.ಮಹೇಶ್, ಎಂ.ವಿ.ನಾರಾಯಣ್, ಕೆ.ಪಿ.ಶರತ್ ವಿ.ಸಿ.ಅಮೃತ್, ರೇಖಾ ಟಿ.ಆರ್. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಜೇಸ್ ಬಿ.ಡಿ, ಸಂಘದ ವ್ಯವಸ್ಥಾಪಕ ರಾಜು ಆರ್. ಇದ್ದರು.