ಗೋಣಿಕೊಪ್ಪಲು, ಜು. ೨೬: ಕಾಡಾ ನೆಯ ಹಿಂಡು ಕಾಫಿ ತೋಟದಲ್ಲಿ ನೆಲೆ ನಿಂತಿರುವುದರಿAದ ಗ್ರಾಮದ ಇತರ ಭಾಗಗಳಲ್ಲಿ ರೈತರ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಿಗೆ ಲಗ್ಗೆಯಿಟ್ಟು ಧ್ವಂಸ ಮಾಡುತ್ತಿವೆ. ಇದರಿಂದ ರೈತರು ಕಂಗೆಟ್ಟಿದ್ದು ಅಪಾರ ನಷ್ಟ ಸಂಭವಿಸಿದೆ.

ದ.ಕೊಡಗಿನ ಮಾಯಮುಡಿ ಗ್ರಾಮದ ಕಮಟೆ ಸುತ್ತಮುತ್ತಲಿನ ಪ್ರದೇಶದ ಕಾಫಿ ತೋಟದ ೪ರಿಂದ ೫ ಕಾಡಾನೆಗಳ ಹಿಂಡು ಬಾಳಾಜಿ ಗ್ರಾಮದಲ್ಲಿ ತಿರುಗಾಡುತ್ತಿದ್ದು, ರೈತರ ಭೂಮಿಗಳಿಗೆ ನುಗ್ಗಿ ಧ್ವಂಸಗೊಳಿ ಸುತ್ತಿವೆ. ಮಾಹಿತಿ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಓಡಿಸುವ ಪ್ರಯತ್ನ ಮಾಡಿದರೂ ಇವುಗಳ ಹಿಂಡು ಮತ್ತೊಂದು ತೋಟದಲ್ಲಿ ಪ್ರತ್ಯಕ್ಷವಾಗುತ್ತಿವೆ.

ತೋಟಕ್ಕೆ ತೆರಳಲು ಕಾರ್ಮಿಕರು ಸಹಜವಾಗಿಯೇ ಹಿಂದೇಟು ಹಾಕುತ್ತಿದ್ದಾರೆ. ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಮನೆಯಿಂದ ರಸ್ತೆ ಮಾರ್ಗವಾಗಿ ತೆರಳಲು ಕಷ್ಟವಾ ಗುತ್ತಿದೆ. ನಗರ ಪ್ರದೇಶಕ್ಕೆ ತೆರಳುವ ಈ ಭಾಗದ ಜನರು ಸಂಜೆಯ ವೇಳೆಯಲ್ಲಿ ಮನೆಗೆ ಆಗಮಿಸಲು ತೊಂದರೆ ಅನುಭವಿಸುತ್ತಿದ್ದಾರೆ.

ಭತ್ತದ ಗದ್ದೆಯಲ್ಲಿ ರೈತರು ನಾಟಿ ಮಾಡಿದ್ದು ಇದನ್ನು ಕಾಡಾನೆಗಳು ಧ್ವಂಸಗೊಳಿಸುತ್ತಿವೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಈ ಭಾಗದ ನಾಗರಿಕರು ಮನವಿ ಮಾಡಿದ್ದಾರೆ.

-ಹೆಚ್.ಕೆ. ಜಗದೀಶ್