ಕೂಡಿಗೆ, ಜು. ೨೬: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಸದಸ್ಯ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಕೆ.ಆರ್. ಸುರೇಶ್ ಗೆಲುವು ಸಾಧಿಸಿದ್ದಾರೆ.

ಒಟ್ಟು ೭೩೧ ಮತಗಳಲ್ಲಿ ಕೆ.ಆರ್. ಸುರೇಶ್ ೪೦೩ ಮತಗಳು, ಕೆ. ಹೆಚ್. ಮಹೇಶ್ ಕುಮಾರ್ ಅವರಿಗೆ ೩೨೧ ಮತಗಳು ಬಂದಿವೆ. ೭ ಮತಗಳು ತಿರಸ್ಕೃತಗೊಂಡಿದ್ದವು.

ಮತ ಎಣಿಕೆಯ ಮೇಲ್ವಿಚಾರಕರಾಗಿ ಸುಂಟಿಕೊಪ್ಪ ನಾಡ ಕಚೇರಿಯ ಉಪ ತಹಶೀಲ್ದಾರ್ ಶಿವಪ್ಪ ಮತ್ತು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಪ್ರಥಮ ದರ್ಜೆ ಗುಮಾಸ್ತ ರಾಜೇಶ್, ಕಾರ್ಯನಿರ್ವಹಿಸಿದರು.

ಗೆಲುವು ಸಾಧಿಸಿದ ಹಿನ್ನೆಲೆ ಬೆಂಬಲಿಗರು ಸಿಹಿ ಹಂಚಿ ವಿಜಯೋತ್ಸವ ಆಚರಣೆ ನಡೆಸಿದರು.

ಈ ಸಂದರ್ಭದಲ್ಲಿ ಕುಶಾಲನಗರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ್ ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು ಕೂಡ್ಲೂರು ಗ್ರಾಮದ ಪ್ರಮುಖರು ಹಾಜರಿದ್ದರು.