ಮಡಿಕೇರಿ, ಜು. ೨೫: ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಭಾಗಮಂಡಲ ಸುತ್ತಮುತ್ತಲಿನ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರು ಹಾಗೂ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು.

ಭಾಗಮಂಡಲ, ಬೆಂಗೂರು, ಚೇರಂಬಾಣೆ ಸುತ್ತಮುತ್ತ ಪ್ರದೇಶಗಳಿಗೆ ತೆರಳಿದ ಸಚಿವರುಗಳು ಸಾರ್ವಜನಿಕರ ಅಹವಾಲು ಆಲಿಸಿದರು.

ದೋಣಿಕಾಡು ಸೇತುವೆ ನಿರ್ಮಾಣ, ಕೊಟ್ಟೂರಿನ ಬಾಡಗ ಸೇತುವೆ ದುರಸ್ತಿಗೆ ಕ್ರಮವಹಿಸುವಂತೆ ಸ್ಥಳೀಯರು ಶಾಸಕರ ಗಮನ ಸೆಳೆದರು. ಈ ಸಂದರ್ಭ ಸಚಿವರು ದೋಣಿಕಾಡು ಸೇತುವೆ ನಿರ್ಮಾಣ ಚಿಂತನೆ ಇಲ್ಲ. ಪರ್ಯಾಯ ಕ್ರಮದ ಬಗ್ಗೆ ಆಲೋಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸ್ಥಳೀಯ ಗ್ರಾ.ಪಂ. ಉಪಾಧ್ಯಕ್ಷ ಹೊಸೂರು ಸತೀಶ್, ಭಾಗಮಂಡಲ ಮೇಲ್ಸೇತುವೆ ನಿರ್ಮಾಣಗೊಳ್ಳುತ್ತಿದ್ದು, ಭೂಸ್ವಾಧೀನ ಸಮಸ್ಯೆಯಿಂದ ವಿಳಂಬವಾಗುತ್ತಿದೆ ಎಂದು ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಕಂದಾಯ ಸಚಿವರು, ಭೂಸ್ವಾಧೀನ ಸಮಸ್ಯೆ ಇಲ್ಲ. ಮಳೆಯಿಂದ ತಡವಾಗಿದೆ. ಮಳೆಗಾಲ ಮುಗಿದ ಬಳಿಕ ಸಮಸ್ಯೆ ಪರಿಹರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭ ವೀರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂಥರ್‌ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ತಹಶೀಲ್ದಾರ್ ಕಿರಣ್ ಸೇರಿದಂತೆ ಇನ್ನಿತರರು ಹಾಜರಿದ್ದರು.