ಸೋಮವಾರಪೇಟೆ, ಜು. ೨೫: ತಾಲೂಕಿನ ಮಟ್ಟಿಗೆ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾದ ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಸೂರ್ಲಬ್ಬಿ ವಿಭಾಗಕ್ಕೆ ಕಳೆದ ೩ ದಿನಗಳಲ್ಲಿ ದಾಖಲೆಯ ೪೧ ಇಂಚು ಮಳೆಯಾಗಿದೆ. ಕಳೆದ ತಾ. ೨೩ರಂದು ೧೩.೨, ತಾ. ೨೪ ರಂದು ೧೫ ಇಂಚು, ತಾ. ೨೫ರಂದು ೧೨.೮ ಇಂಚು ಮಳೆಯಾಗಿದ್ದು, ಜನಜೀವನ ಸ್ತಬ್ಧಗೊಂಡಿದೆ. ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಕಾಫಿ, ಏಲಕ್ಕಿಗೆ ಕೊಳೆರೋಗ ಬಾಧಿಸಿದೆ. ಗ್ರಾಮಸ್ಥರು ಮನೆಯಿಂದ ಹೊರಬರಲೂ ಹಿಂದೇಟು ಹಾಕುವಂತಾಗಿದೆ. ಮಳೆಯಿಂದಾಗಿ ಗರ್ವಾಲೆ ರಸ್ತೆಯ ನೀಕಮಲ ಬಳಿಯಿರುವ ತಂಬುಕುತ್ತೀರ ಕುಶಾಲಪ್ಪ ಅವರ ಮನೆಯ ಸಮೀಪ ರಸ್ತೆಯ ಒಂದು ಪಾರ್ಶ್ವ ಕುಸಿತವಾಗಿದೆ. ಕಾಫಿಗೆ ಈಗಾಗಲೇ ಕೊಳೆ ರೋಗ ಬಾಧಿಸಿದೆ. ತೋಟದಲ್ಲಿರುವ ಮರಗಳು, ಮರದ ಕೊಂಬೆಗಳು
(ಮೊದಲ ಪುಟದಿಂದ) ಮುರಿದುಬಿದ್ದು, ಅಳಿದುಳಿದಿದ್ದ ಏಲಕ್ಕಿಯೂ ನಷ್ಟವಾಗಿದೆ. ಇದರೊಂದಿಗೆ ಸೂರ್ಲಬ್ಬಿ ಭಾಗದಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಮರಿಯಾನೆಯನ್ನು ಒಳಗೊಂಡAತೆ ಮೂರು ಆನೆಗಳಿದ್ದು, ಗ್ರಾಮಸ್ಥರು ಮನೆಯಿಂದ ಹೊರ ಬರಲೂ ಆತಂಕ ಪಡುವಂತಾಗಿದೆ. ಅರಣ್ಯ ಇಲಾಖೆಯವರು ಆಗಮಿಸಿ ಮಳೆ ಕಡಿಮೆಯಾದ ನಂತರ ಆನೆಗಳನ್ನು ಓಡಿಸುತ್ತೇವೆ. ಅಲ್ಲಿಯವರೆಗೆ ಗಲಾಟೆ ಮಾಡದೇ ಇದ್ದುಬಿಡಿ;ಎಚ್ಚರಿಕೆಯಿಂದ ಓಡಾಡಿ ಎಂದು ಸಲಹೆ ನೀಡಿದ್ದಾರೆ. ಇತ್ತ ಭಾರೀ ಮಳೆ ಹಾಗೂ ಕಾಡಾನೆಗಳ ಓಡಾಟದಿಂದಾಗಿ ಸೂರ್ಲಬ್ಬಿ ಮಂದಿ ಆತಂಕದಿAದಲೇ ದಿನ ಕಳೆಯುತ್ತಿದ್ದಾರೆ.
ಕಳೆದ ವರ್ಷ ಸೂರ್ಲಬ್ಬಿಗೆ ಒಟ್ಟಾರೆ ೨೬೧ ಇಂಚು ಮಳೆಯಾಗಿತ್ತು. ಈ ಅವಧಿಗೆ ೧೨೦.೫೦ ಇಂಚು ಮಳೆ ಸುರಿದಿತ್ತು. ಪ್ರಸಕ್ತ ವರ್ಷ ಈ ಅವಧಿಗೆ ೧೧೨.೫೬ ಇಂಚು ಮಳೆಯಾಗಿದೆ. ಕಳೆದ ೪ ದಿನಗಳಲ್ಲಿಯೇ ೪೫.೨೪ ಇಂಚು ಮಳೆ ಸುರಿದಿದೆ ಎಂದು ಕಳೆದ ಅನೇಕ ವರ್ಷಗಳಿಂದ ಮಳೆ ಮಾಪನ ಮಾಡುತ್ತಿರುವ ಸೂರ್ಲಬ್ಬಿಯ ಮುದ್ದಂಡ ನಾಣಿಯಪ್ಪ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
ಸೂರ್ಲಬ್ಬಿಗೆ ೪೧ ಇಂಚು ಮಳೆ