ಪೊನ್ನAಪೇಟೆ, ಜು. ೨೫: ಕೃಷಿ ಪ್ರಧಾನ ಜಿಲ್ಲೆಯಾಗಿರುವ ಕೊಡಗಿನಲ್ಲಿ ಕೃಷಿ ಎಂಬುದು ಕೆಲವರಿಗೆ ಸಂಸ್ಕೃತಿ, ಹಲವರಿಗೆ ಬದುಕು. ಇನ್ನು ಕೆಲವರಿಗೆ ಬಂಡವಾಳ, ಮತ್ತೆ ಹಲವರಿಗೆ ಖುಷಿ. ಹೀಗೆ ಕೃಷಿಯನ್ನು ಒಂದೊAದು ರೀತಿಯಲ್ಲಿ ಹೇಳ ಬಹುದು. ಅದೇ ರೀತಿ ಇಲ್ಲೊಬ್ಬ ರೈತ ಕೃಷಿಯನ್ನು ಕಷ್ಟ, ನಷ್ಟಕ್ಕೆ ಹೋಲಿಸದೆ ಖುಷಿಯಿಂದ ಕೃಷಿ ಮಾಡಿದರೆ ಕೈತುಂಬಾ ಸಂಪಾದನೆ ಮಾಡಬಹುದೆನ್ನುತ್ತಾರೆ. ಅವರೇ ನಮ್ಮ ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಹುದೂರು ಗ್ರಾಮದ ಪ್ರಗತಿ ಪರ ಕೃಷಿಕ ಬಿ.ಪಿ. ರವಿಶಂಕರ್.

ತಮ್ಮ ಜೀವನವನ್ನೇ ಕೃಷಿಗೆ ಸಮರ್ಪಿಸಿಕೊಂಡು ಬದುಕಿನ ಬಂಡಿಯನ್ನು ಖುಷಿಯಿಂದ ಸಾಗಿಸುತ್ತಾ, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆದರ್ಶವಾಗಿರುವ ರವಿಶಂಕರ್ ಅವರಿಗೆ ಕರ್ನಾಟಕ ಸರ್ಕಾರದ ೨೦೨೨-೨೦೨೩ನೇ ಸಾಲಿನ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ಘೋಷಣೆಯಾಗಿದೆ. ಶಾಲೆ ಕಲಿಸುವ ಶಿಕ್ಷಣಕ್ಕಿಂತ ಬದುಕು ಕಲಿಸುವ ಶಿಕ್ಷಣವೇ ಮಹತ್ವ ವಾದದ್ದು, ಕೃಷಿಯನ್ನು ಖುಷಿ ಯಿಂದ ಮಾಡಿದರೆ ಆತ್ಮತೃಪ್ತಿಯ ಜೊತೆಗೆ ಹೆಚ್ಚು ಆದಾಯವನ್ನು ಗಳಿಸಬಹುದು ಎಂಬುದು ಇವರ ಅಭಿಪ್ರಾಯ.

ಹೌದು, ೪೫ಕ್ಕೂ ಅಧಿಕ ವರ್ಷಗಳಿಂದ ಕೃಷಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದರ ಜೊತೆಗೆ ಸಮಗ್ರ ಕೃಷಿಯಲ್ಲಿ ಸಾಧನೆ ಮಾಡುವ ಮೂಲಕ ರವಿಶಂಕರ್ ಅವರು ಇತರರಿಗೆ ಮಾದರಿಯಾಗಿದ್ದಾರೆ.

ಕೃಷಿ ಮೇಲೆ ಬದ್ಧತೆ

ತಮ್ಮ ಎಳೆ ವಯಸ್ಸಿನಲ್ಲಿಯೇ ಕೃಷಿಯತ್ತ ಆಕರ್ಷಣೆಗೊಂಡಿದ್ದ, ರವಿಶಂಕರ್ ಅವರು, ಬಿಕಾಂ ಪದ ವೀಧರರಾಗಿದ್ದು, ದೊಡ್ಡವರಾಗುತ್ತಲೇ ಕೃಷಿಯ ಮೇಲೆ ಮತ್ತಷ್ಟು ಪ್ರೀತಿಯನ್ನು ಬೆಳೆಸಿಕೊಂಡು, ಕೃಷಿಯನ್ನೇ ಮುಖ್ಯ ಕಸುಬಾಗಿ ಆಯ್ಕೆ ಮಾಡಿಕೊಂಡರು. ತಮ್ಮ ಸಹೋದರ ಜೈಶಂಕರ್ ಜೊತೆಗೂಡಿ, ಭತ್ತದ ಕೃಷಿಯಲ್ಲಿ ತೊಡಗಿಕೊಂಡರು. ಗದ್ದೆ ಕೃಷಿಯ ಮೇಲೆ ಅಪಾರ ಪ್ರೀತಿ ಬೆಳೆಸಿ ಕೊಂಡಿದ್ದ ಇವರು, ಮೊದ ಮೊದಲು ತಮ್ಮ ಗದ್ದೆಯಲ್ಲಿ ಕೃಷಿ ಮಾಡುವುದರ ಜೊತೆಗೆ, ಅಕ್ಕಪಕ್ಕದವರ ಗದ್ದೆಯನ್ನು ಗುತ್ತಿಗೆ ಪಡೆದು ಉತ್ತಮ ಪಸಲು ತೆಗೆಯುತ್ತಿದ್ದರು. ಗುತ್ತಿಗೆ ಕೊಟ್ಟ ಗದ್ದೆಯವರೊಬ್ಬರು, ಈತನಿಗೆ ಏನೂ ಗತಿಯಿಲ್ಲದೇ ನಮ್ಮ ಗದ್ದೆಯನ್ನು ಗುತ್ತಿಗೆ ತೆಗೆದುಕೊಳ್ಳುತ್ತಿದ್ದಾನೆ ಎಂದು ಕುಹಕವಾಡಿದಾಗ, ಇದರಿಂದ ಮನನೊಂದ ರವಿಶಂಕರ್ ಅವರು, ಬೇರೆಯವರ ಗದ್ದೆಯನ್ನು ಗುತ್ತಿಗೆ ತೆಗೆದುಕೊಳ್ಳುವುದನ್ನು ಬಿಟ್ಟು ತಮ್ಮದೇ ಗದ್ದೆಯಲ್ಲಿ ತಮ್ಮ ಸಹೋದರ ಜೈಶಂಕರ್ ಅವರೊಂದಿಗೆ ಕೃಷಿಯಲ್ಲಿ ತೊಡಗಿಕೊಂಡರು. ಅಂದು ಇವರ ಬಗ್ಗೆ ಕುಹಕವಾಡಿದವರು ಇಂದು ತಮ್ಮ ಗದ್ದೆಯನ್ನು ಪಾಳುಬಿಟ್ಟಿದ್ದಾರೆ. ಆದರೆ ರವಿಶಂಕರ್ ಅವರು ಎಷ್ಟೇ ನಷ್ಟ, ಏಳು, ಬೀಳು ಬಂದರೂ ತಾವು ಕೃಷಿ ಆರಂಭಿಸಿದ ವರ್ಷದಿಂದ, ಇದುವರೆಗೂ ಒಂದು ವರ್ಷವೂ ಕೂಡ ತಮ್ಮ ಗದ್ದೆಯನ್ನು ನಾಟಿ ನೆಡದೆ ಬಿಟ್ಟಿಲ್ಲ. ಇದು ಅವರ ಕೃಷಿ ಮೇಲಿನ ಅಪಾರವಾದ ಪ್ರೀತಿ ಮತ್ತು ಬದ್ಧತೆಯನ್ನು ತೋರಿಸುತ್ತದೆ.

ಎಕರೆಗೆ ೨೦ ಕ್ವಿಂಟಾಲ್ ಬೆಳೆ

ತಮ್ಮ ೩೫ ಎಕರೆ ಗದ್ದೆಯಲ್ಲಿ ಪ್ರತಿ ವರ್ಷ ಕೃಷಿ ಮಾಡುತ್ತಾ ಬರುತ್ತಿರುವ ಇವರು ಸರಾಸರಿ ೭೫೦ ಕ್ವಿಂಟಲ್ ಭತ್ತ ಬೆಳೆಯುತ್ತಾರೆ. ಸುಮಾರು ೨೦ಕ್ಕೂ ಹೆಚ್ಚು ತಳಿಗಳನ್ನು ಬೆಳೆಯುವ ಮೂಲಕ, ಬಿತ್ತನೆ ಬೀಜದ ಉತ್ಪಾದನೆ ಮಾಡುತ್ತಿರುವುದು ಇವರ ಕೃಷಿಯಲ್ಲಿನ ವಿಶೇಷತೆಯಾಗಿದೆ.

ಬಿತ್ತನೆ ಬೀಜ ಕೊಳ್ಳಲು ಜಿಲ್ಲೆ ಸೇರಿದಂತೆ ಹೊರಜಿಲ್ಲೆಯಿಂದಲೂ ರೈತರು ಬರುತ್ತಾರೆ. ವಿವಿಧ ತಳಿಯ ಬಿತ್ತನೆ ಬೀಜ ಕ್ವಿಂಟಾಲ್‌ಗೆ ರೂ. ೩೫೦೦ ರಿಂದ ೧೦ ಸಾವಿರದವರೆಗೂ ಮಾರಾಟವಾಗುತ್ತದೆ.

ಎಕರೆಗೆ ಸರಾಸರಿ ೧೮ ರಿಂದ ೨೦ ಕ್ವಿಂಟಾಲ್ ಭತ್ತ ಬೆಳೆಯುತ್ತಾರೆ. ಇವರು ಭತ್ತವನ್ನು ಕಾರ್ಮಿಕರಿಂದ ಕಟಾವು ಮಾಡಿಸುವುದರಿಂದ, ಹುಲ್ಲು ಮಾರಾಟ ಮಾಡಿ ಆದಾಯ ಗಳಿಸುತ್ತಾರೆ. ಒಂದು ಹುಲ್ಲಿನ ಕಂತೆ ೩೪ ರಿಂದ ೪೦ ರೂ.ಗೆ ಮಾರಾಟ ವಾಗುವುದರಿಂದ ಆದಾಯ ದೊರೆಯುತ್ತಿದೆ.

ಸಮಗ್ರ ಕೃಷಿಯಲ್ಲಿ ಸಾಧನೆ

ಭತ್ತದ ಕೃಷಿಯ ಜೊತೆಗೆ, ತೋಟಗಾರಿಕೆಯಲ್ಲಿಯೂ ಯಶಸ್ಸು ಸಾಧಿಸಿರುವ ಇವರು ತಮ್ಮ ಮನೆಯ ಸುತ್ತಮುತ್ತ ಹಾಗೂ ಕಾಫಿ ತೋಟದಲ್ಲಿ, ವಿವಿಧ ಬಗೆಯ ಮರಗಳನ್ನು ಬೆಳೆಸಿದ್ದಾರೆ. ೧೫೦ಕ್ಕೂ ಹೆಚ್ಚು ಬಗೆಯ ಹಲಸು ಬೆಳೆದಿದ್ದಾರೆ. ಮೇಣ ಹಾಗೂ ಮೇಣ ರಹಿತವಾಗಿರುವ ವಿವಿಧ ಬಗೆಯ ಹಲಸಿನ ಮರ ಇವರ ತೋಟದಲ್ಲಿವೆ. ವಿದೇಶಿ ಹಣ್ಣುಗಳು ಸೇರಿದಂತೆ ಸುಮಾರು ೧೫೦ ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಬೆಣ್ಣೆ ಹಣ್ಣು ಉತ್ತಮ ಇಳುವರಿ ಕೊಡುತ್ತಿದ್ದು ಇದರಿಂದ ಉತ್ತಮ ಆದಾಯ ಗಳಿಸು ತ್ತಿದ್ದಾರೆ. ಮೀನುಗಾರಿಕೆಯಲ್ಲಿಯೂ ಯಶಸ್ಸು ಸಾಧಿಸಿರುವ ಇವರು, ತಮ್ಮ ಗದ್ದೆ ಹಾಗೂ ತೋಟದಲ್ಲಿರುವ ೬ ಕೆರೆಗಳಲ್ಲಿ ವಿವಿಧ ಜಾತಿಯ ಮೀನುಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಅಲ್ಲದೆ ಮೀನು ಮರಿಗಳನ್ನು ಇತರರಿಗೆ ಮಾರಾಟ ಮಾಡುತ್ತಾರೆ. ರೋಹು, ಕಾಟ್ಲಾ, ಹುಲ್ಲುಗೆಂಡೆ, ಕಾಮನ್ ಕಾರ್ಫ್, ಬರೆಮೀನು ಸೇರಿದಂತೆ ಹಲವು ಜಾತಿಯ ಮೀನು ಸಾಕಾಣಿಕೆ ಮಾಡುತ್ತಿದ್ದು, ಇದರಿಂದ ಆದಾಯವನ್ನು ಗಳಿಸುತ್ತಿದ್ದಾರೆ. ತಮ್ಮ ತೋಟದಲ್ಲಿ ಜೇನು ಸಾಕಾಣಿಕೆ ಯನ್ನು ಕೂಡ ರವಿಶಂಕರ್ ಮಾಡುತ್ತಿದ್ದಾರೆ. ಇದರಿಂದ ಹಣ್ಣಿನ ಗಿಡಗಳ ಪರಾಗಸ್ಪರ್ಶಕ್ಕೆ ಅನುಕೂಲ ವಾಗುತ್ತದೆ ಎನ್ನುತ್ತಾರೆ ರವಿಶಂಕರ್.

ಪಾಳು ಬಿಡಬೇಡಿ

ಎಷ್ಟೇ ಹಣವಿದ್ದರೂ ಕೂಡ ಮನುಷ್ಯನು ಹೊಟ್ಟೆ ಹಸಿವಾದಾಗ ಅನ್ನವನ್ನೇ ತಿನ್ನಬೇಕು. ಹಣ ತಿನ್ನುವುದಕ್ಕಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಸಮಸ್ಯೆ ಸೇರಿದಂತೆ, ವಿವಿಧ ಕಾರಣ ಗಳಿಂದಾಗಿ ಬಹುತೇಕ ರೈತರು ತಮ್ಮ ಗದ್ದೆಯನ್ನು ಪಾಳು ಬಿಟ್ಟಿದ್ದಾರೆ. ಗದ್ದೆ ಕೃಷಿ ಕಡಿಮೆಯಾದಷ್ಟು ಭೂಮಿಯಲ್ಲಿ ಅಂತರ್ಜಲ ಕಡಿಮೆಯಾಗಿ ಕುಡಿಯುವ ನೀರಿಗೂ ಸಮಸ್ಯೆ ಆಗುವ ಕಾಲ ಬಂದೇ ಬರುತ್ತದೆ. ಕೊಡಗಿನ ಜನ ತಮ್ಮ ಗದ್ದೆಯನ್ನು ಪಾಳುಬಿಡದೆ, ನಾಟಿ ನೆಡುವ ಕಾರ್ಯಕ್ಕೆ ಮುಂದಾಗಬೇಕು. ಸರ್ಕಾರವು ಕೂಡ ಭತ್ತದ ಕೃಷಿ ಮಾಡುವ ರೈತರಿಗೆ ನಷ್ಟ ಸಂಭವಿಸಿದಾಗ ನಷ್ಟವನ್ನು ತುಂಬಿಕೊಡಲು ಮುಂದೆ ಬರಬೇಕು. ಭತ್ತ ಬೆಳೆಯುವ ರೈತರಿಗೆ ವಿಶೇಷ ಪ್ರೋತ್ಸಾಹ ಧನ ನೀಡಬೇಕು. ಪ್ರತಿ ವರ್ಷ ನಾಟಿ ನೆಡುವ ಕಾರಣ ನಮ್ಮ ಗದ್ದೆ ಬದಿಯಲ್ಲಿ ಇರುವ ಪಂಚಾಯಿತಿ ಬೋರ್‌ವೆಲ್‌ನಲ್ಲಿ ಒಮ್ಮೆಯೂ ಕೂಡ ನೀರು ಕಡಿಮೆಯಾಗಿಲ್ಲ. ಗದ್ದೆಯನ್ನು ಪಾಳು ಬಿಡದೇ ಅಂತರ್ಜಲವನ್ನು ಕಾಪಾಡಿ ಕೊಳ್ಳಬೇಕು. ಹಿಂದೆ ಕೊಡಗಿನ ರಸ್ತೆ ಯುದ್ದಕ್ಕೂ ಗದ್ದೆಗಳು ಕಾಣುತಿದ್ದವು. ಈಗ ಗದ್ದೆಗಳೆಲ್ಲ ಲೇಔಟ್‌ಗಳಾಗಿವೆ. ಪ್ರತಿ ವರ್ಷ ನಾಟಿ ನೆಡುವ ಮೂಲಕ ಇರುವ ಗದ್ದೆಯನ್ನಾದರೂ ರೈತರು ಉಳಿಸಿಕೊಳ್ಳಬೇಕು ಎನ್ನುತ್ತಾರೆ.

ಕೃಷಿ ಮುಂದುವರೆಸಿ

ಬಹುತೇಕ ಜನರು ಕಾರ್ಮಿಕರ ಸಮಸ್ಯೆಯಿಂದಾಗಿ ಭತ್ತದ ಕೃಷಿಯನ್ನು ಕೈಬಿಟ್ಟಿದ್ದಾರೆ. ಆದರೆ ರವಿಶಂಕರ್ ಅವರು ಮಾತ್ರ ತಮ್ಮಲ್ಲಿಗೆ ಬರುವ ಕಾರ್ಮಿಕರೊಡನೆ ಉತ್ತಮ ಒಡನಾಟವನ್ನು ಹೊಂದಿದ್ದು, ಅವರ ಕಷ್ಟಗಳಿಗೆ ಭಾಗಿಯಾಗುವ ಮೂಲಕ ಕಾರ್ಮಿಕರನ್ನ ಸ್ನೇಹಿತರಂತೆ ಕಾಣುತ್ತಾರೆ. ಇದರಿಂದಾಗಿ ಅವರ ಕೃಷಿ ಚಟುವಟಿಕೆಗಳಿಗೆ ಇದುವರೆಗೂ ಕಾರ್ಮಿಕರ ಸಮಸ್ಯೆ ಅಷ್ಟಾಗಿ ಕಾಡಿಲ್ಲ ಎನ್ನುತ್ತಾರೆ. ಸುಮಾರು ೪೦ ಕಾರ್ಮಿಕರಿಗೆ ಇವರು ಕೆಲಸ ನೀಡುತ್ತಿದ್ದು, ಕಾರ್ಮಿಕರನ್ನು ಪ್ರೀತಿಯಿಂದ ಕಾಣುವುದರಿಂದ ಕಾರ್ಮಿಕರು ಕೂಡ ಇವರ ಕೃಷಿ ಕಾರ್ಯಗಳಿಗೆ ಸರಿಯಾದ ಸಮಯಕ್ಕೆ ಸಿಗುತ್ತಿದ್ದಾರೆ. ಇವರ ತಂದೆ ನಿವೃತ್ತ ಪಶು ವೈದ್ಯರಾದ ಪದ್ಮನಾಭ ರಾವ್ ಅವರ ಮಾರ್ಗದರ್ಶನದಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ ರವಿಶಂಕರ್ ಅವರಿಗೆ, ಕೆನರಾ ಬ್ಯಾಂಕ್ ಉದ್ಯೋಗಿ ಆಗಿರುವ ಮಡದಿ ಪ್ರಶಾಂತಿ ರವಿಶಂಕರ್ ಅವರು ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ. ಇವರ ಪುತ್ರ ಸಿಎ ಮಾಡುತ್ತಿದ್ದು, ಮಗಳು ಪಿಯುಸಿ ಓದುತ್ತಿದ್ದಾರೆ. ಮಕ್ಕಳಿಗೂ ಕೂಡ ತಾವು ಯಾವುದೇ ಉದ್ಯೋಗಕ್ಕೆ ಸೇರಿಕೊಂಡರೂ ಕೂಡ ಒಬ್ಬ ರೈಟರ್‌ಅನ್ನು ನೇಮಿಸಿಕೊಂಡಾದರೂ, ಭತ್ತದ ಕೃಷಿಯನ್ನು ನಿಲ್ಲಿಸದೆ ಮುಂದುವರೆಸಿ ಎಂದು ಸಲಹೆ ನೀಡಿದ್ದೇನೆ ಎನ್ನುವ ರವಿಶಂಕರ್, ಸಹೋದರ ಜೈಶಂಕರ್ ಕೃಷಿಯಲ್ಲಿನ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಕಾರಣ ಕೃಷಿಯಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಸಹೋದರನ ಮೇಲೆ ಅಭಿಮಾನ ವ್ಯಕ್ತಪಡಿಸುತ್ತಾರೆ.

ಪ್ರಶಸ್ತಿ: ರವಿಶಂಕರ್ ರವರಿಗೆ ೨೦೨೦ ರಲ್ಲಿ ತಾಲೂಕು ಮಟ್ಟದ ಉತ್ತಮ ರೈತ ಪ್ರಶಸ್ತಿ, ೨೦೨೧ ರಲ್ಲಿ ಕರ್ನಾಟಕ ಜೀವ ವೈವಿಧ್ಯ ಪ್ರಶಸ್ತಿ, ಕೆಳದಿ ಶಿವಪ್ಪ ನಾಯಕ ವಿಶ್ವವಿದ್ಯಾ ನಿಲಯದಿಂದ ಉತ್ತಮ ರೈತ ಪ್ರಶಸ್ತಿ ಲಭಿಸಿದೆ. ಪ್ರಸ್ತುತ ಇವರು ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಳ್ಳುವ ಮೂಲಕ ಕೊಡಗಿಗೆ ಕೀರ್ತಿ ತಂದಿದ್ದಾರೆ. ಇವರು ಕೃಷಿ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲಿ. ಇವರ ಕೃಷಿ ಬದುಕು ಇಂದಿನ ಯುವಜನತೆಗೆ ಪ್ರೇರಣೆಯಾಗಲಿ ಎಂಬುದು ನಮ್ಮ ಆಶಯ. ಇವರ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆಸಕ್ತರು ರವಿಶಂಕರ್ ಅವರ ಮೊ. ೯೯೦೧೬೯೯೯೨೬ ಅನ್ನು ಸಂಪರ್ಕಿಸ ಬಹುದಾಗಿದೆ.

- ಚನ್ನನಾಯಕ, ಪೊನ್ನಂಪೇಟೆ.