ಸೋಮವಾರಪೇಟೆ, ಜು. ೨೫: ಇನ್ನರ್ ವೀಲ್ ಆಫ್ ಸೋಮವಾರಪೇಟೆ ಗೋಲ್ಡ್ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇಲ್ಲಿನ ಸಾಕ್ಷಿ ಕನ್ವೆನ್‌ಷನ್ ಸಭಾಂಗಣದಲ್ಲಿ ನಡೆಯಿತು.
ನೂತನ ಸಾಲಿನ ಅಧ್ಯಕ್ಷೆ ಸಂಧ್ಯಾ ಕೃಷ್ಣಪ್ಪ ಹಾಗೂ ಕಾರ್ಯದರ್ಶಿ ತನ್ಮಯಿ ಪ್ರವೀಣ್ ಅವರುಗಳಿಗೆ ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ. ಸಾರಿಕ ಪ್ರಸಾದ್ ಪದಗ್ರಹಣ ನೆರವೇರಿಸಿದರು. ನಂತರ ಮಾತನಾಡಿ, ಪ್ರಪಂಚದಲ್ಲಿ ಅತಿ ದೊಡ್ಡ ಮಹಿಳಾ ಸಂಘಟನೆಯಾಗಿ ಇನ್ನರ್ ವೀಲ್ ಗುರುತಿಸಿಕೊಂಡಿದ್ದು, ಸೇವೆ ಮಾಡುವ ಮನಸ್ಸು ಇರುವವರು ಎಲ್ಲರೂ ಇದರಲ್ಲಿ ಸದಸ್ಯತ್ವ ಪಡೆಯಲು ಅವಕಾಶ ಇದೆ ಎಂದರು.
ಅಧ್ಯಕ್ಷೆ ಸಂಧ್ಯಾ ಕೃಷ್ಣಪ್ಪ ಮಾತನಾಡಿ, ಮಹಿಳೆಯರ ಸಂಘಟನೆ, ಸೇವಾ ಮನೋಭಾವ ಮತ್ತು ಅವರಲ್ಲಿನ ಪ್ರತಿಭೆ ಗುರುತಿಸಿ ಅವುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಕೆಲಸ ಇನ್ನರ್ ವೀಲ್ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರಕ್ತದಾನ ಮತ್ತು ಮೃತಪಟ್ಟ ನಂತರ ಕಣ್ಣಿನ ದಾನ ನೋಂದಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಸಮಾಜ ಮುಖಿ ಕೆಲಸಗಳಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ಜಿಲ್ಲಾ ಸಂಪಾದಕಿ ಉಮಾ ಮಹೇಶ್, ಇನ್ನರ್ ವೀಲ್ ಆಫ್ ಸೋಮವಾರಪೇಟೆ ಗೋಲ್ಡ್ ಪ್ರಧಾನ ಕಾರ್ಯದರ್ಶಿ ತನ್ಮಯಿ ಪ್ರವೀಣ್, ಹಿಂದಿನ ಸಾಲಿನ ಅಧ್ಯಕ್ಷೆ ಪ್ರೇಮ ಹೃಷಿಕೇಶ್ ಇದ್ದರು.
ಇದೇ ಸಂದರ್ಭ ನೂತನ ಸಾಲಿನ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಸಂಗೀತಾ ದಿನೇಶ್, ಸಹ ಕಾರ್ಯದರ್ಶಿ ನಂದಿನಿ ಗೋಪಾಲ್, ಖಜಾಂಚಿ ಅಮೃತಾ ಕಿರಣ್, ಬುಲೇಟಿನ್ ಸಂಪಾದಕಿ ಸುವಿನಾ ಕೃಪಾಲ್, ರಾಜೇಶ್ವರಿ, ಕವಿತಾ, ಜ್ಞಾನೇಶ್ವರಿ, ಚಿತ್ರಾ ಬೋಜರಾಜ್, ರಾಣಿ ಶ್ಯಾಮ್ ಅಧಿಕಾರ ಸ್ವೀಕರಿಸಿದರು.