ಗೋಣಿಕೊಪ್ಪಲು, ಜು.೨೩: ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಗಿರಿಜನರ ಹಾಡಿಗೆ ತೆರಳುವ ಕಾಲುಸೇತುವೆ ಕೊಚ್ಚಿಹೋದ ಘಟನೆ ಪೊನ್ನಂಪೇಟೆ ತಾಲೂಕು ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗಿರಿಜನರಿರುವ ಚಿಣ್ಣರ ಹಾಡಿಗೆ ತೆರಳುವ ತೋಡಿಗೆ ನಿರ್ಮಿಸಿದ್ದ ಕಾಲುಸೇತುವೆ ಮಳೆ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಹಾಡಿಯ ಗಿರಿಜನರು ಹಾಗೂ ಶಾಲಾ ವಿದ್ಯಾರ್ಥಿಗಳು ದಿನ ನಿತ್ಯದ ಓಡಾಟಕ್ಕೆ ಈ ಸೇತುವೆಯನ್ನು ಅವಲಂಭಿಸಿದ್ದರು.

ಇದೀಗ ಈ ಭಾಗದ ಜನರು ದಿನನಿತ್ಯದ ಕೆಲಸ ಕಾರ್ಯಗಳಿಗೆ ತೆರಳಲು ಸಮೀಪದ ಕಾಫಿ ತೋಟ ಮತ್ತು ಗದ್ದೆಗಳ ಮೂಲಕ ಕಾಲ್ನಡಿಗೆಯಲ್ಲಿ ತೆರಳಿ ಮುಖ್ಯರಸ್ತೆಗೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ.

- ಹೆಚ್.ಕೆ.ಜಗದೀಶ್