ವೀರಾಜಪೇಟೆ:, ಜು. ೨೨: ನಗರದಲ್ಲಿ ವಾಹನ ಸಂಚಾರವು ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗಿದ್ದು. ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆಗೊಳಿಸಿ ತೆರಳುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ರಸ್ತೆ ಸಂಚಾರ ಮಾಡಲು ಕಷ್ಟ ಸಾಧ್ಯವಾಗಿದ್ದು ಸೂಕ್ತ ರೀತಿಯಲ್ಲಿ ವಾಹನ ನಿಲುಗಡೆಗೊಳಿಸಬೇಕೆಂದು ಸಾರ್ವಜನಿಕರು ಇಲಾಖೆಯನ್ನು ಒತ್ತಾಯ ಮಾಡಿದ್ದಾರೆ.

ವೀರಾಜಪೇಟೆ ನಗರದಲ್ಲಿ ವಾಹನಗಳ ದಟ್ಟಣೆ ಕಾಣಿಸಿಕೊಂಡಿದ್ದು ಬೆಳಿಗ್ಗೆ ಮತ್ತು ಸಂಜೆ ವೇಳೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ರಸ್ತೆ ಸಂಚಾರದಲ್ಲಿ ಅನಾನುಕೂಲವಾಗುತ್ತಿದೆ. ವೀರಾಜಪೇಟೆ ನಗರದ ಮೂರ್ನಾಡು ರಸ್ತೆಯಿಂದ ಚಿಕ್ಕಪೇಟೆ ಜಂಕ್ಷನ್‌ವರೆಗೆ ರಸ್ತೆಯ ಎರಡು ಬದಿಗಳಲ್ಲಿ ವಾಹನ ನಿಲುಗಡೆಗೊಳಿಸಿ ವಾಹನ ಚಾಲಕರು ಹಿಂದಿರುಗುತ್ತಿದ್ದಾರೆ. ಸಂತ ಅನ್ನಮ್ಮ ಕಾಲೇಜು, ಸರ್ಕಾರಿ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಜಯಪ್ರಕಾಶ್ ನಾರಾಯಣ್ ಪ್ರೌಢಶಾಲೆ, ಕಾವೇರಿ ಆಂಗ್ಲ ಮಾಧ್ಯಮ ಶಾಲೆ ಮತ್ತು ತ್ರಿವೇಣಿ ಆಂಗ್ಲ ಮಾದ್ಯಮ ಶಾಲೆಗಳಿಗೆ ತೆರಳುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಮಾರ್ಗದಲ್ಲೇ ತೆರಳಬೇಕಾಗಿದೆ. ಮಠದ ಗದ್ದೆಯ ಸಮೀಪದ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಬೃಹತ್ ವಾಹನಗಳು ನಿಲುಗಡೆಗೊಳ್ಳುತ್ತಿವೆ. ಅಲ್ಲದೆ ಇದೇ ಮಾರ್ಗದಲ್ಲಿ ವಿದ್ಯುತ್ ಇಲಾಖೆ ಟೆಲಿಕಾಂ ಇಲಾಖೆ, ಖಾಸಗಿ ಬೃಹತ್ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ರಸ್ತೆಯ ಬದಿಗಳಲ್ಲಿ ವಾಹನ ನಿಲುಗಡೆಯಿಂದಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ವಿದ್ಯಾರ್ಥಿಗಳು ಮುಖ್ಯ ರಸ್ತೆಯಲ್ಲೇ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯ ಬೆಳಿಗ್ಗೆ ಸುಮಾರು ೮.೩೦ ರಿಂದ ೧೦ ಗಂಟೆಯವರೆಗೆ ಮತ್ತು ಸಂಜೆ ೩ ರಿಂದ ೪ ರವರೆಗೆ ವಿದ್ಯಾರ್ಥಿಗಳ ಓಡಾಟ ಹೆಚ್ಚು. ವಿದ್ಯಾರ್ಥಿಗಳು ಶಾಲೆ ಮತ್ತು ಕಾಲೇಜಿಗೆ ತೆರಳುವ ಭರದಲ್ಲಿ ಅನಾಹುತಗಳು ಸಂಭವಿಸುವ ಘಟನೆಗಳು ಎದುರಾಗಬಹುದು. ಈ ಸಮಯದಲ್ಲಿ ವಾಹನಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯು ಕ್ರಮ ವಹಿಸಬೇಕು. ೧೫ ದಿನಗಳಿಗೊಮ್ಮೆ ರಸ್ತೆಯ ಒಂದು ಬದಿ ಮತ್ತು ೧೫ ದಿನಗಳು ಮತ್ತೊಂದು ಬದಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿದಲ್ಲಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಉಪಯುಕ್ತವಾಗುತ್ತದೆ. ಅಲ್ಲದೆ ವಿದ್ಯಾರ್ಥಿಗಳು ಮುಕ್ತವಾಗಿ ಸಂಚಾರ ಮಾಡಬಹುದಾಗಿದೆ ಎಂದು ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ. - ಕಿಶೋರ್ ಕುಮಾರ್ ಶೆಟ್ಟಿ