ಸೋಮವಾರಪೇಟೆ, ಜು. ೨೨: ತಾನು ಕೆಲಸ ಮಾಡಿಕೊಂಡಿದ್ದ ಮನೆಗೆ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಮಾರಾಟ ಮಾಡಿದ್ದ ಮಹಿಳೆಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣ ಸಮೀಪದ ಕರ್ಕಳ್ಳಿ ಬಾಣೆ ಗ್ರಾಮದ ಜಯಂತಿ ಬಂಧಿತ ಆರೋಪಿಯಾಗಿದ್ದು ಪಟ್ಟಣದ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜೀವನ್ ಅವರ ಮನೆಯಲ್ಲಿ ಇಟ್ಟಿದ್ದ ರೂ. ೬.೬೦ ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ, ಪಟ್ಟಣದ ಜ್ಯುವೆಲ್ಲರಿ ಅಂಗಡಿಗೆ ಮಾರಾಟ ಮಾಡಿದ್ದಳು.

ರಾಜೀವನ್ ಅವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಜಯಂತಿ, ಅವರ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳೆದ ೨ ವಾರಗಳ ಹಿಂದೆಯೇ ಕಳವು ಮಾಡಿ, ಪಟ್ಟಣದ ಅಂಗಡಿಯೊAದಕ್ಕೆ ಮಾರಾಟ ಮಾಡಿದ್ದಳು.

ಮೊನ್ನೆಯಷ್ಟೇ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣಗಳು ಕಳವಾಗಿರುವ ಬಗ್ಗೆ ರಾಜೀವನ್ ಅವರಿಗೆ ತಿಳಿದು ಬಂದಿದ್ದು, ತಕ್ಷಣ ಸೋಮವಾರಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರನಾಯಕ್ ಅವರ ತಂಡ, ಅಂತಿಮವಾಗಿ ಮನೆ ಕೆಲಸದಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ.

ಕಳವು ಮಾಡಿದ್ದ ಚಿನ್ನದ ಸರ, ತಾಳಿ ಸರ, ಚಿನ್ನದ ಬಳೆ, ನೆಕ್ಲೇಸ್, ಓಲೆ, ಉಂಗುರ, ಡಾಲರ್, ಬ್ರಾಸ್‌ಲೆಟ್ ಸೇರಿದಂತೆ ಒಟ್ಟು ೧೯ ಬಗೆಯ ವಿವಿಧ ಚಿನ್ನಾಭರಣಗಳನ್ನು ಪಟ್ಟಣದ ಜ್ಯುವೆಲ್ಲರಿ ಅಂಗಡಿಯೊAದಕ್ಕೆ ಮಾರಾಟ ಮಾಡಿದ್ದಳು.

(ಮೊದಲ ಪುಟದಿಂದ) ಪೊಲೀಸರಿಂದ ಬಂಧನಕ್ಕೊಳಗಾದ ನಂತರ ನೀಡಿದ ಮಾಹಿತಿ ಮೇರೆ ಪಟ್ಟಣದ ಜ್ಯುವೆಲ್ಲರಿ ಅಂಗಡಿಗೆ ತೆರಳಿ ಎಲ್ಲಾ ಚಿನ್ನಾಭರಣಗಳನ್ನು ವಶಕ್ಕೆ ಪಡೆದು, ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ಆರೋಪಿಗೆ ತಾ. ೦೨.೦೮.೨೦೨೩ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರ್‌ರಾಜ್ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಗಂಗಾಧರಪ್ಪ, ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಅವರ ನೇತೃತ್ವ ಹಾಗೂ ಕುಶಾಲನಗರ ಉಪ ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಗಳ ಸಹಕಾರದೊಂದಿಗೆ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಠಾಣಾಧಿಕಾರಿ ರಮೇಶ್‌ಕುಮಾರ್, ವಿರೂಪಾಕ್ಷ, ಸಿಬ್ಬಂದಿಗಳಾದ ಅನಂತ್‌ಕುಮಾರ್, ಸುಧೀಶ್‌ಕುಮಾರ್, ಶಿವರಾಜು, ಮಂಜುನಾಥ್, ಬಸಪ್ಪ, ಮಲ್ಲೇಶ್, ಅಬ್ದುಲ್ ರೆಹಮಾನ್, ಸಾಜನ್, ವೀಣಾ, ಲೀಲಾಂಬಿಕೆ, ರಾಜಶ್ರೀ, ಮಡಿಕೇರಿ ಸಿಡಿಆರ್ ಘಟಕದ ರಾಜೇಶ್, ಗಿರೀಶ್, ಪ್ರವೀಣ್ ಅವರುಗಳು ಭಾಗವಹಿಸಿದ್ದರು.