ಭಾಗಮಂಡಲ, ಜು. ೨೨: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಹೊರತಾಗಿಯೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹಿನ್ನಡೆ ಕಂಡಿದೆ. ಹಿಂದಿನ ತಪ್ಪು ಮರುಕಳಿಸದಂತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು. ಭಾಗಮಂಡಲದ ನಿಡ್ಯಮಲೆ ಐನ್ಮನೆಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿ ಪಕ್ಷವು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಕೊಡಗು ವಿಶ್ವವಿದ್ಯಾನಿಲಯದ ಸ್ಥಾಪನೆ, ಅರೆಭಾಷೆ ಅಕಾಡೆಮಿ ಸ್ಥಾಪನೆ, ಕೊಡವ ಅಭಿವೃದ್ಧಿ ನಿಗಮದ ಸ್ಥಾಪನೆ ಸೇರಿದಂತೆ ೧೦ ಹಲವು ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಕೈಗೊಂಡಿದ್ದು, ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರು ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ಸನ್ನದ್ದರಾಗಿ ಬಿಜೆಪಿ ಪಕ್ಷವನ್ನು ಗೆಲ್ಲಿಸಲು ಪಣತೊಡಬೇಕು ಎಂದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ವಿಶ್ವಕ್ಕೆ ಅಗ್ರಮಾನ್ಯ ನಾಯಕರಾಗಿದ್ದಾರೆ. ಆದರೆ ಅವರು ಭಾರತಕ್ಕೆ ಬೇಡ ಎಂಬ ರೀತಿಯಲ್ಲಿ ವಿರೋಧ ಪಕ್ಷಗಳು ವರ್ತಿಸುತ್ತಿವೆ. ಕಾಂಗ್ರೆಸ್ ಪಕ್ಷದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಕುಯ್ಯಮುಡಿ ಮನೋಜ್ ಮಾತನಾಡಿ, ಕೊಡಗಿನಲ್ಲಿ ಬಿಜೆಪಿಯಿಂದ ಪ್ರಗತಿ ಆಗಿದೆ. ಭಾಗಮಂಡಲದಲ್ಲಿ ರಾಮಮಂದಿರ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಂಸದರ ನಿಧಿಯಿಂದ ಅನುದಾನ ದೊರಕುವಂತಾಗಬೇಕು ಎಂದರು. ಈ ಸಂದರ್ಭ ಸಂಸದ ಪ್ರತಾಪ್ ಸಿಂಹ ರಾಮಮಂದಿರ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಹಣ ಒದಗಿಸುವ ಭರವಸೆ ನೀಡಿದರು. ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪಿ.ಎಂ ರಾಜೀವ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ಮಡಿಕೇರಿ ಮಂಡಲ ಅಧ್ಯಕ್ಷ ಕಾಂಗಿರ ಸತೀಶ್, ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಮಿತ, ಉಪಾಧ್ಯಕ್ಷ ಸತೀಶ್ ಕುಮಾರ್, ಪ್ರಮುಖರಾದ ದಬ್ಬಡ್ಕ ಮನು, ಜೀವನ್ ಅಯ್ಯಂಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಯ್ಯುಮುಡಿ ರಂಜು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.