ಕುಶಾಲನಗರ, ಜು. ೨೩: ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಕಾವೇರಿ ನದಿಯಲ್ಲಿ ಗರಿಷ್ಠ ಮಟ್ಟದ ನೀರು ಹರಿಯುತ್ತಿದ್ದು ಹಾರಂಗಿ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ನದಿಗೆ ಹರಿಸುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ವ್ಯಾಪ್ತಿಯ ಕೆಲವು ಬಡಾವಣೆಗಳು ಮತ್ತು ಕೊಪ್ಪ ಗ್ರಾಮ ವ್ಯಾಪ್ತಿಯ ನದಿ ತಟದ ಹೊಲ ಗದ್ದೆಗಳು ನೀರಿನಿಂದ ಆವೃತಗೊಂಡಿವೆ.
ಕಾವೇರಿ ನದಿಯಲ್ಲಿ ಒಂದೇ ದಿನ ೧೫ ಅಡಿಗಳಷ್ಟು ನೀರು ಏರಿಕೆ ಕಂಡು ಬಂದಿದ್ದು ನದಿ ತಟದ ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಸಂಭಾವ್ಯ ಪ್ರವಾಹ ಪರಿಸ್ಥಿತಿ ಬಗ್ಗೆ ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆಯ ಅಧ್ಯಕ್ಷರಾದ ಎಂ ಎನ್ ಚಂದ್ರಮೋಹನ್ ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅವರ ಗಮನಕ್ಕೆ ತಂದ ಬೆನ್ನಲ್ಲೇ ಸ್ಪಂದಿಸಿದ ಶಾಸಕರು ಅಣೆಕಟ್ಟು ಅಧಿಕಾರಿಗಳಿಗೆ ಕುಶಾಲನಗರದ ತಗ್ಗು ಪ್ರದೇಶದ ಬಡಾವಣೆಗಳಿಗೆ ಭೇಟಿ ನೀಡಲು ಸೂಚನೆ ನೀಡಿದರು. ಯಾವುದೇ ಸಂದರ್ಭ ಬಡಾವಣೆಗಳಿಗೆ ನೀರು ನುಗ್ಗದಂತೆ ಎಚ್ಚರ ವಹಿಸಲು ಸಲಹೆ ನೀಡಿದ್ದಾರೆ. ಜಲಾಶಯದಿಂದ ಹಂತ ಹಂತವಾಗಿ ನೀರನ್ನು ನದಿಗೆ ಹರಿಸುವಂತೆ ತಿಳಿಸಿದ್ದಾರೆ.
ಹಾರಂಗಿ ಅಣೆಕಟ್ಟೆ ಅಧಿಕಾರಿ ಕಾರ್ಯಪಾಲಕ ಅಭಿಯಂತರ ಬಿ ಜೆ ಪುಟ್ಟಸ್ವಾಮಿ ಮತ್ತಿತರ ಅಧಿಕಾರಿಗಳು ಕುಶಾಲನಗರ ಸಾಯಿ ಬಡಾವಣೆಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು.
ಬಡಾವಣೆಯ ನಿವಾಸಿಗಳ ಜೊತೆ ಚರ್ಚಿಸಿ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.
ಸಾಯಿ ಬಡಾವಣೆ ನಿವಾಸಿಗಳು ಪುರಸಭೆಯ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ನಿವಾಸಿಗಳಾದ ನಂಜುAಡಸ್ವಾಮಿ, ಶಿಲ್ಪ, ಮತ್ತಿತರರು ತಮ್ಮ ಆತಂಕವನ್ನು ಅಧಿಕಾರಿಗಳೊಂದಿಗೆ ತಿಳಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಕೋರಿದರು.
ಹಾರಂಗಿ ಜಲಾಶಯದಿಂದ ೩೫ ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂದು ಅಣೆಕಟ್ಟು ವಿಭಾಗದ ಕಾರ್ಯಪಲಕ ಅಭಿಯಂತರ ಬಿ ಜೆ ಪುಟ್ಟಸ್ವಾಮಿ ತಿಳಿಸಿದ್ದಾರೆ.
ಸಾಯಿ ಬಡಾವಣೆಯ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಅಂದಾಜು ೫ ಕೋಟಿ ರೂ ವೆಚ್ಚದ ಯೋಜನೆಯನ್ನು ರೂಪಿಸಲಾಗಿದ್ದು ಸದ್ಯದಲ್ಲಿಯೇ ಆರಂಭಿಸಲಾಗುವುದು ಎಂದು ಈ ಸಂದರ್ಭ ಮಾಹಿತಿ ನೀಡಿದರು.