ಮಡಿಕೇರಿ, ಜು. ೨೧: ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಕುರಿತು ಸಂಪೂರ್ಣ ವರದಿ ಪಡೆದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ವಿಧಾನಸಭೆ ಅಧಿವೇಶನದಲ್ಲಿ ಭಾಗಮಂಡಲದಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿ ವಿಳಂಬದ ಕುರಿತು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಉಪಮುಖ್ಯಮಂತ್ರಿ, ಕಾವೇರಿ ನದಿಗೆ ಅಡ್ಡಲಾಗಿ ಮೇಲ್ಸೇತುವೆ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ರೂ. ೩೦ ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಗುತ್ತಿಗೆಗೆ ನೀಡಲಾಗಿದೆ. ಪ್ರಸ್ತುತ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸಾರ್ವಜನಿಕರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ೨೦೨೩ರ ಆರ್ಥಿಕ ವರ್ಷದ ಅಂತ್ಯಕ್ಕೆ ರೂ. ೨೬.೩೪ ಕೋಟಿ ವೆಚ್ಚವಾಗಿದೆ. ಭಾಗಮಂಡಲದಿAದ ತಲಕಾವೇರಿ ಹಾಗೂ ಮಡಿಕೇರಿ ರಸ್ತೆಗೆ ರೂ. ೪ ಕೋಟಿ ವೆಚ್ಚದಲ್ಲಿ ೨೯೪.೫ ಮೀಟರ್ ಉದ್ದದ ಕೂಡು ರಸ್ತೆಗೆ ‘ಆರ್.ಸಿ.ಸಿ. ರಿಟೈನಿಂಗ್ ವಾಲ್’ ನಿರ್ಮಾಣವನ್ನು ವಹಿಸಲಾಗಿದೆ. ಈ ಪೈಕಿ ೭೩ ಮೀಟರ್ ಉದ್ದದ ಕಾಮಗಾರಿ ಪೂರ್ಣ ಗೊಂಡಿದ್ದು, ಉಳಿದ ಕಾಮಗಾರಿಯನ್ನು ಮಳೆ ಕಡಿಮೆಯಾದ ತಕ್ಷಣ ಕೈಗೆತ್ತಿಕೊಂಡು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳಿಸ ಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಪೊನ್ನಣ್ಣ ಪ್ರತಿಕ್ರಿಯಿಸಿ, ಮೇಲ್ಸೇತುವೆಯಲ್ಲಿ ಓಡಾಟಕ್ಕೆ ಇನ್ನೂ ಅವಕಾಶ ಮಾಡಿಕೊಟ್ಟಿಲ್ಲ. ರ‍್ಯಾಂಪ್’ ಕೂಡ ನಿರ್ಮಿಸಿಲ್ಲ. ರಸ್ತೆಯಲ್ಲಿ ಕೆಸರು ತುಂಬಿರುವುದರಿAದ ಸಂಚಾರಕ್ಕೆ ಸಮಸ್ಯೆಯಾಗಿದೆ. ವಿಳಂಬದ ಕುರಿತು ಗುತ್ತಿಗೆದಾರರಿಗೆ ನೋಟೀಸ್ ನೀಡಿಲ್ಲ. ಈ ಕುರಿತು ತನಿಖೆಯ ಅಗತ್ಯತೆ ಇದೆ ಎಂದು ಪ್ರಸ್ತಾಪಿಸಿದರು.

ಇದಕ್ಕೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಈ ಕುರಿತು ಪ್ರತ್ಯೇಕ ವರದಿ ಪಡೆಯುತ್ತೇನೆ. ಖುದ್ದು ಭೇಟಿ ನೀಡಿ ಸಮಸ್ಯೆ ಕುರಿತು ಅವಲೋಕಿಸುತ್ತೇನೆ. ತಾನು ಮೇಕೆದಾಟು ಪಾದಯಾತ್ರೆಯನ್ನು ತಲಕಾವೇರಿ ಸನ್ನಿಧಿಯಿಂದ ಆರಂಭಿಸಿದ್ದೆ ಎಂದು ಸ್ಮರಿಸಿದ ಅವರು, ಮತ್ತೊಮ್ಮೆ ಪುಣ್ಯಕ್ಷೇತ್ರಕ್ಕೆ ಬರಬೇಕೆಂದು ಹೇಳಿದರು.