ಪೊನ್ನಂಪೇಟೆ, ಜು.೨೧: ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡ್ಚಿ ಗ್ರಾಮದ ಮನೆಯೊಂದರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ.
ಕೊಡ್ಚಿ ಗ್ರಾಮದ ನಿವಾಸಿ ಮಾಚಿಮಾಡ ಡಿ. ಮಾಚಯ್ಯ ಎಂಬವರ ಮನೆ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ತಾ.೨೦ರಂದು ನಸುಕಿನ ಜಾವ ೩.೧೫ ರ ಸಮಯದಲ್ಲಿ ಗುಂಡಿನ ದಾಳಿಯಾಗಿದೆ. ಗಾಢÀ ನಿದ್ರೆಯಲ್ಲಿದ್ದ ಮನೆ ಮಂದಿ ಗುಂಡಿನ ಸದ್ದಿಗೆ ಬೆಚ್ಚಿ ಬಿದ್ದಿದ್ದಾರೆ. ಮನೆಯ ಮುಂಭಾಗ ಬಲಭಾಗದ ಕಿಟಿಕಿಗೆ ೨ ಗುಂಡುಗಳು ತಗುಲಿದ್ದು, ಕಿಟಕಿಯ ಗಾಜುಗಳು ಪುಡಿಪುಡಿಯಾಗಿವೆ. ಅಲ್ಲದೇ ಬೆಡ್ ರೂಮ್ನ ಗೋಡೆಗಳಿಗೂ ಕೆಲವು ಗುಂಡಿನ ಚಿಲ್ಲುಗಳು ತಗುಲಿವೆ.
ಗುಂಡಿನ ದಾಳಿಯಿಂದ ಮನೆ ಮಾಲೀಕ ಎಂ.ಡಿ. ಮಾಚಯ್ಯ, ಪತ್ನಿ ಹಾಗೂ ಪುತ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳ್ಳಂಬೆಳಿಗ್ಗೆ ಮನೆಯವರ ಕೂಗಾಟ ಕೇಳಿ ಪಕ್ಕದ ಮನೆಯವರು ಶ್ರೀಮಂಗಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ, ಶ್ರೀಮಂಗಲ ಠಾಣಾಧಿಕಾರಿ ಶಿವಾನಂದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮಹಜರು ನಡೆಸಿದ್ದಾರೆ. ಈ ಸಂದರ್ಭ ಎಎಸ್ಐ ತೀರ್ಥಕುಮಾರ್, ಸಿಬ್ಬಂದಿಗಳಾದ ಎಂ.ಕೆ. ದೇವಯ್ಯ, ಬಿ.ಟಿ. ಮಂಜುನಾಥ, ಹೆಚ್.ಎಂ. ಉದಯ, ಶಿವಪ್ಪ, ಈರಣ್ಣ ಕನ್ನಾಳ್, ಶರಣಪ್ಪ ಹಾಗೂ ಚಾಲಕ ರಾಮಲಿಂಗಪ್ಪ ಹಾಜರಿದ್ದರು.
ಕಾರಿಗೆ ಹಾನಿಪಡಿಸಿದ್ದ ಕಿಡಿಗೇಡಿಗಳು
ಕೆಲವು ದಿನಗಳ ಹಿಂದೆ ಮಾಚಯ್ಯ ಅವರ ಮನೆಯ ಸದಸ್ಯರೆಲ್ಲ ಬೆಂಗಳೂರಿಗೆ ಕಾರ್ಯ ನಿಮಿತ್ತ ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದೆ ಇದ್ದ ಸಂದರ್ಭ ದುಷ್ಕರ್ಮಿ ಗಳು, ಮನೆಯಲ್ಲಿ ನಿಲ್ಲಿಸಲಾಗಿದ್ದ ಕಾರಿನ ಹಿಂಬದಿಯ ಗಾಜು ಒಡೆದು ಹಾಕಿ, ಕಾರಿನ ಮೇಲ್ಮೆöÊಗೆ ಚೂಪಾದ ವಸ್ತುವಿನಿಂದ ಗೀಚಿ ವಿರೂಪ ಗೊಳಿಸಿದ್ದರು.
(ಮೊದಲ ಪುಟದಿಂದ) ಈ ಘಟನೆಯ ಬಗ್ಗೆ ಕೂಡ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಒಂದೇ ಮನೆಯಲ್ಲಿ ಒಂದು ವಾರದ ಅವಧಿಯಲ್ಲಿ ಎರಡು ಘಟನೆಗಳು ನಡೆದಿದ್ದು, ಶ್ರೀಮಂಗಲ ಠಾಣೆಯ ಪೊಲೀಸರು ಈ ಎರಡು ಘಟನೆಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಿಂದ ಈ ಎರಡೂ ಕೃತ್ಯಗಳನ್ನು ನಡೆಸಿದವರು ಯಾರು? ಈ ಎರಡೂ ಘಟನೆಗಳು ನಡೆಯಲು ಕಾರಣ ಏನು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
-ಚನ್ನನಾಯಕ