ನಾಪೋಕ್ಲು, ಜು. ೨೦: ಮುಂಗಾರು ಮಳೆಯ ಭೋರ್ಗರೆತದೊಂದಿಗೆ ಹಲವು ಜಲಪಾತಗಳು ಮನಸೆಳೆಯುತ್ತವೆ. ಅವುಗಳಲ್ಲಿ ಮಾದಂಡ ಅಬ್ಬಿ ಜಲಪಾತವೂ ಒಂದು. ಕೊಡಗಿನಲ್ಲಿ ಅತೀ ಎತ್ತರವಾದ ತಡಿಯಂಡಮೋಳ್ ಬೆಟ್ಟ ಸಾಲುಗಳ ಕಣಿವೆಗಳಿಂದ ಹಲವಾರು ನದಿಗಳು ಉಗಮಿಸಿ ಹರಿದು ಬರುತ್ತಿದ್ದು ಅವುಗಳ ಲ್ಲೊಂದಾದ ಮಾದಂಡ ಅಬ್ಬಿ ಜಲಪಾತ ಸುಮಾರು ನೂರೈವತ್ತು ಅಡಿ ಎತ್ತರದಿಂದ ಭೋರ್ಗರೆದು ಧುಮ್ಮಿಕ್ಕುತ್ತಿದೆ. ಬಂಡೆಗಲ್ಲುಗಳ ಮೇಲಿನಿಂದ ಧುಮುಕುವ ಈ ಜಲಪಾತ ಮನಮೋಹಕ. ವೀಕ್ಷಕರ ನೋಟಕ್ಕೆ ಸುಲಭದಲ್ಲಿ ಸಿಕ್ಕದೇ ದೂರವೇ ಉಳಿದಿರುವ ಜಲಪಾತ ಈಗ ರಭಸದಿಂದ ಧುಮ್ಮಿಕ್ಕುತ್ತಿದೆ.

ಕಕ್ಕಬೆ ಕುಂಜಲ ಗ್ರಾಮ ಪಂಚಾಯಿತಿಯ ನಾಲಡಿ ಗ್ರಾಮದ ಮೂಲಕ ತಡಿಯಂಡಮೋಳ್ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಎತ್ತರೆತ್ತರಕ್ಕೇರುತ್ತಿದ್ದಂತೆ ಬಲಕ್ಕೆ ತಿರುಗಿ ಸಾಗಿದರೆ ಮಾದಂಡ ಅಬ್ಬಿ ತಲುಪಬಹುದು. ಮಳೆಗಾಲದಲ್ಲಿ ಸಂತೋಷದಿAದ ಜಲಧಾರೆಯ ಸೊಬಗು ಸವಿಯಬಹುದು. ಎಲ್ಲೆಲ್ಲೂ ಹಸಿರು ಸಿರಿ. ನಡುವೆ ಮಾದಂಡ ಅಬ್ಬಿಯ ಬೆಳ್ನೊರೆ. ಇದರ ನೋಟ ದೂರದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯ ಸುತ್ತಮುತ್ತಲಲ್ಲಿ ಕಾಣಬಹುದಾಗಿದೆ. ಹಸಿರು ವೃಕ್ಷಗಳ ನಡುವೆ ಸಿಕ್ಕ ಇಳಿಜಾರಿನಲ್ಲಿ ಬಂಡೆಗಲ್ಲುಗಳ ಮೇಲೆ ಚಂದದ ನೋಟ ಸವಿಯಲು ಎರಡು ಕಣ್ಣುಗಳು ಸಾಲವು. ಜಲಪಾತಕ್ಕೆ ತೆರಳುವ ರಸ್ತೆಗಳು ಉತ್ತಮವಾಗಿಲ್ಲ. ಪ್ರವಾಸಿಗರಿಗೆ ದಾರಿ ಸೂಚಕಗಳಿಲ್ಲ. ಸ್ಥಳಿಯರಿಗೆ ಮಾತ್ರ ಈ ಜಲಪಾತ ಹೊರಸೂಸುವ ಚೆಲುವು ಮಾತ್ರ ನಿತ್ಯನೂತನ. ಸಾಹಸಪ್ರಿಯರು ಮಾತ್ರ ಪ್ರಯತ್ನಪಟ್ಟು ಸಾಗಿದರೆ ಮಾದಂಡ ಅಬ್ಬಿಯ ಚೆಲುವನ್ನು ಆಸ್ವಾದಿಸಬಹುದು.

ದುಗ್ಗಳ ಸದಾನಂದ