ಗೋಣಿಕೊಪ್ಪಲು, ಜು. ೨೦: ಮಕ್ಕಳಿಗೆ ಹಾಲು ತರಲು ಮನೆಯಿಂದ ಅನತಿ ದೂರದ ಅಂಗಡಿಗೆ ತೆರಳುತ್ತಿದ್ದ ವೇಳೆ ಕಾಡುಕೋಣವೊಂದು ಕಾರ್ಮಿಕನ ಮೇಲೆ ದಾಳಿ ನಡೆಸಿದ ಘಟನೆ ಚೆÀನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ ಬಳಿಯ ಚಿಕ್ಕ ರೇಷ್ಮೆ ಹಾಡಿ ಬಳಿ ನಡೆದಿದೆ.
ಕಾಡುಕೋಣ ದಾಳಿಗೆ ಒಳಗಾದ ವ್ಯಕ್ತಿ ಜೇನುಕುರುಬರ ಬೋಜ (೬೫)ನನ್ನು ಸ್ಥಳೀಯ ಗಿರಿಜನ ಮುಖಂಡರಾದ ಸಿದ್ದಪ್ಪ ಪಾಲಿಬೆಟ್ಟ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಬೋಜನ ತೋಡೆ ಭಾಗಕ್ಕೆ, ಕೈ ಹಾಗೂ ಕಾಲಿನ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಸುದ್ದಿ ತಿಳಿದ ಕೆಪಿಸಿಸಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ ಪಾಲಿಬೆಟ್ಟ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ದಾಳಿಗೊಳಗಾದ ಬೋಜನ ಆರೋಗ್ಯ ವಿಚಾರಿಸಿದರು. ಹೆಚ್ಚಿನ ಚಿಕಿತ್ಸೆ ನೀಡಲು ಮಡಿಕೇರಿ ಆಸ್ಪತ್ರೆಗೆ ಸೇರಿಸಲು ಸಹಕರಿಸಿದರು.
ದೂರವಾಣಿ ಮೂಲಕ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಸಂಪರ್ಕಿಸಿದ ಸಂದರ್ಭ ಕೂಡಲೇ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಕಾರ್ಮಿಕನನ್ನು ಕರೆದುಕೊಂಡು ಹೋಗಲು ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ
(ಮೊದಲ ಪುಟದಿಂದ) ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಶಾಸಕರ ಸೂಚನೆ ಮೇರೆ ಆ್ಯಂಬ್ಯುಲೆನ್ಸ್ ಮೂಲಕ ಬೋಜನನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕರೆದೊಯ್ದುರು. ಹಾಡಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆ ಹಾಗೂ ಕಾಡುಕೋಣಗಳ ಹಾವಳಿ ಇರುವುದರಿಂದ ಇಲಾಖೆಯ ಸಿಬ್ಬಂದಿಗಳು ಕ್ರಮ ಕೈಗೊಳ್ಳುವಂತೆ ಶಾಸಕ ಪೊನ್ನಣ್ಣ ಇದೇ ಸಂದರ್ಭದಲ್ಲಿ ಹೇಳಿದರು. ಆಸ್ಪತ್ರೆ ಬಳಿ ಪಾಲಿಬೆಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಎಂ.ಎA.ಕಾಳಪ್ಪ, ಗ್ರಾ.ಪಂ. ಸದಸ್ಯ ಅಬ್ದುಲ್ ನಾಸರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಸತ್ಯ, ಜಿ.ಪಂ. ಮಾಜಿ ಸದಸ್ಯ ಹೆಚ್.ಬಿ. ಗಣೇಶ್, ಯರವ ಸಂಘದ ತಮ್ಮಯ್ಯ, ವಲಯ ಅರಣ್ಯ ಅಧಿಕಾರಿ ಚೆನ್ನವೀರೆಶ್, ಸಿಬ್ಬಂದಿ ಪ್ರವೀಣ್, ಶಿವು ಸೇರಿದಂತೆ ಪ್ರಮುಖರು ಹಾಜರಿದ್ದರು.