ಕರಿಕೆ, ಜು. ೨೦ : ಇಲ್ಲಿಗೆ ಸಮೀ ಪದ ಮೇಲಡ್ಕ ವನ್ಯಜೀವಿ ವಿಭಾಗದ ಚೆಕ್‌ಪೋಸ್ಟ್ಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಲಕಾವೇರಿ ಅಭಯಾರಣ್ಯ ವ್ಯಾಪ್ತಿಯ ಮೇಲಡ್ಕ ಕಳ್ಳ ಬೇಟೆ ತಡೆ ಶಿಬಿರದ ಬಳಿ ವನ್ಯಜೀವಿ ವಿಭಾಗದ ವತಿಯಿಂದ ಇತ್ತೀಚೆಗೆ ರಸ್ತೆ ಬದಿಯಲ್ಲಿ ಹಾಗೂ ಅರಣ್ಯದೊಳಗೆ ಕೇರಳದವರು ಕಸ, ತ್ಯಾಜ್ಯ ಸೇರಿದಂತೆ ಇತರ ವಸ್ತು ಗಳನ್ನು ಎಸೆಯುತ್ತಿದ್ದು, ಈ ಬಗ್ಗೆ ‘ಶಕ್ತಿ’ ಹಲವು ಬಾರಿ ವರದಿ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೇರಳದ ಪ್ರಯಾಣಿಕರು ಮದ್ಯದ ಬಾಟಲಿ, ಕಸ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆ ಬದಿಯ ಅರಣ್ಯದೊಳಗೆ ಎಲ್ಲೆಂದರಲ್ಲಿ ಎಸೆಯು ತ್ತಿದ್ದು, ಇದನ್ನು ಸ್ವಚ್ಛಗೊಳಿಸುವುದು ಸಿಬ್ಬಂದಿಗಳಿಗೆ ಪ್ರಯಾಸವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಚೆಕ್‌ಪೋಸ್ಟ್ ಅಳವಡಿಸಿ ಹೊರಗಿನ ವಾಹನಗಳಿಗೆ ನಿಗದಿತ ಶುಲ್ಕ ವಿಧಿಸಿ ಪ್ಲಾಸ್ಟಿಕ್ ಕಸಗಳನ್ನು ಎಸೆಯದಂತೆ ಸೂಚನೆ ನೀಡಿ ಕಳುಹಿಸಲಾಗುತ್ತಿದೆ. ಅಲ್ಲದೇ ಅಲ್ಲಲ್ಲಿ ಸೂಚನಾ ಫಲಕ ಅಳವಡಿಸಲಾಗಿದ್ದು, ಸಿಬ್ಬಂದಿಗಳು ವಾರದಲ್ಲಿ ಎರಡು ಬಾರಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ಇದೀಗ ನಿಯಂತ್ರಣಕ್ಕೆ ಬಂದಿರುತ್ತದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ದಲ್ಲಿ ವಲಯ ಅರಣ್ಯ ಅಧಿಕಾರಿ ಕೊಟ್ರೇಶ್ ಹಾಜರಿದ್ದರು.

- ಸುಧೀರ್ ಹೊದ್ದೆಟ್ಟಿ