ಕುಶಾಲನಗರ, ಜು. ೧೯: ಆನೆ ಮಾನವ ಸಂಘರ್ಷ ವನ್ನು ಶಾಶ್ವತವಾಗಿ ತಪ್ಪಿಸಲು ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣ ಗೊಳಿಸುವ ಬಗ್ಗೆ ಪ್ರಕಟಗೊಂಡ ‘ಶಕ್ತಿ’ಯ ವಿಶೇಷ ವರದಿ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ.
ಕೊಡಗು ಜಿಲ್ಲೆಯಲ್ಲಿ ರೈಲ್ವೆ ಬ್ಯಾರಿಕೇಡ್ ಕಾಮಗಾರಿಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಅನುದಾನ ಕಲ್ಪಿಸಬೇಕು ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.
ಕೊಡಗು ಜಿಲ್ಲೆಯಲ್ಲಿ ಕಾಡಿನಿಂದ ನಾಡಿಗೆ ಲಗ್ಗೆ ಹಾಕುವ ಕಾಡಾನೆಗಳಿಂದ ೨೦೨೦ ರಲ್ಲಿ ೭ಮಂದಿ ೨೦೨೧ ರಲ್ಲಿ ೧೧, ೨೦೨೨-೨೩ ರಲ್ಲಿ ೩ ಮಂದಿ ಮೃತಪಟ್ಟಿರುವುದಾಗಿ ವಿಧಾನಸಭೆಗೆ ಡಾ. ಮಂಥರ್ ಗೌಡ ಅವರು ಮಾಹಿತಿ ನೀಡಿದರು.
ಪ್ರಸಕ್ತ ಕೊಡಗು ಜಿಲ್ಲೆಯಲ್ಲಿ ೧೧೬ ಕಿ.ಮೀ. ಉದ್ದದ ಬ್ಯಾರಿಕೇಡ್ ಅಳವಡಿಸಲು ಬಾಕಿ ಇದ್ದು ಈ ವ್ಯಾಪ್ತಿಯಲ್ಲಿ ಆನೆಗಳ ದಾಳಿ ಅಧಿಕವಾಗಿದೆ. ಇತ್ತೀಚೆಗೆ ಸೋಮವಾರಪೇಟೆ ವ್ಯಾಪ್ತಿ ಮತ್ತು ದುಬಾರೆ ಕಡೆಗಳಲ್ಲಿ ಕಾಡಾನೆಗಳು ದಾಳಿ ಮಾಡಿರುವ ಘಟನೆಗಳು ಮರುಕಳಿಸಿವೆ ಎಂಬ ಮಾಹಿತಿಗಳ ಸಮಗ್ರ ವಿವರ ನೀಡಿದರು.
ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವಾಲಯ ಮೂಲಕ ಶಾಶ್ವತ ಪರಿಹಾರಕ್ಕೆ ಹೆಚ್ಚಿನ ಅನುದಾನ ಕಲ್ಪಿಸಬೇಕೆಂದು ಅವರು ಕೋರಿದರು. ಅರಣ್ಯ ಇಲಾಖೆಯ ವಾಚರ್ ಸಿಬ್ಬಂದಿಗಳಿಗೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಇಲಾಖೆಯ ಮೂಲಕ ಹೆಚ್ಚಿನ ಹಣಕಾಸು ಒದಗಿಸುವಂತೆ ಶಾಸಕರು ಇದೇ ಸಂದರ್ಭ ಪ್ರಸ್ತಾಪ ಸಲ್ಲಿಸಿದರು. ತಾ. ೧೫ ರಂದು `ಶಕ್ತಿ'ಯಲ್ಲಿ ‘‘ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಸ್ಥಗಿತ. ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ರೈತಾಪಿ ವರ್ಗ ಕಂಗಾಲು’’ ಎಂಬ ವರದಿ ಪ್ರಕಟಗೊಂಡಿರುವುದನ್ನು ಸ್ಮರಿಸಬಹುದು.
- ಚಂದ್ರಮೋಹನ್