ಕೂಡಿಗೆ, ಜು. ೧೯: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಗಲ್ಲು ಬಳಿ ಇತ್ತೀಚೆಗೆ ಆಟೋ ಪಲ್ಟಿಯಾಗಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ತೊರೆನೂರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೋಮವಾರಪೇಟೆ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘವು ಆರ್ಥಿಕ ನೆರವು ಒದಗಿಸಿದೆ.
ತೊರೆನೂರು ಸರ್ಕಾರಿ ಪ್ರೌಢಶಾಲೆಯ ಎಂಟನೇ ತರಗತಿಯ ಭುವಿನ್, ಐಶ್ವರ್ಯ ಹಾಗೂ ಭೂಮಿಕ ಅವರಿಗೆ ಸೋಮವಾರಪೇಟೆ ಪ್ರೌಢಶಾಲಾ ಸಹಶಿಕ್ಷಕರ ಹಾಗೂ ಪ್ರೌಢಶಾಲಾ ಶಿಕ್ಷಕರು ಹಾಗೂ ಕೊಡಗು ಜಿಲ್ಲೆಯ ಕೆಲವು ಶಿಕ್ಷಕರು ಸೇರಿ ಭುವನ್ ಎಂಬ ವಿದ್ಯಾರ್ಥಿಗೆ ಒಂದು ಲಕ್ಷ, ಐಶ್ವರ್ಯಗೆ ೫೦ ಸಾವಿರ, ಭೂಮಿಕ ಕೆ.ಎಸ್. ಅವರಿಗೆ ೨೫ ಸಾವಿರ ರೂಪಾಯಿಗಳನ್ನು ಸಂಗ್ರಹಿಸಿ ನೀಡಲಾಗಿದೆ.
ಸಕಾಲದಲ್ಲಿ ಸ್ಪಂದಿಸಿ ಕೈಲಾದ ನೆರವು ಒದಗಿಸಿದ ಸೋಮವಾರಪೇಟೆ ತಾಲೂಕಿನ ಪ್ರೌಢಶಾಲಾ ಸಹ ಶಿಕ್ಷಕರಿಗೆ ಹಾಗೂ ಇನ್ನೂಳಿದ ಶಿಕ್ಷಕರಿಗೆ ಸಂಘದ ಅಧ್ಯಕ್ಷ ಡಿ.ಪಿ. ಧರ್ಮಪ್ಪ, ಕಾರ್ಯದರ್ಶಿ ರತ್ನಕುಮಾರ ಕೆ.ಆರ್., ಸಿ.ಟಿ. ಸೋಮಶೇಖರ್, ದಯಾನಂದ ಮತ್ತು ಪದಾಧಿಕಾರಿಗಳು ಧನ್ಯವಾದ ಸಲ್ಲಿಸಿದರು.
ಜೊತೆಗೆ ಈ ಭಾಗದ ವಿದ್ಯಾರ್ಥಿಗಳು ಓಡಾಡಲು ಅನುವಾಗುವಂತೆ ಆ ಮಾರ್ಗದಲ್ಲಿ ಬಸ್ ವ್ಯವಸ್ಥೆಯನ್ನು ಮಾಡಬೇಕೆಂದು ಸಂಘದ ಮೂಲಕ ಆಗ್ರಹಿಸಿದೆ.