ಸೋಮವಾರಪೇಟೆ, ಜು. ೧೯: ಕೇಂದ್ರ ಸರ್ಕಾರದ ಆದೇಶ ಹಾಗೂ ಪೌರಾಡಳಿತ ನಿರ್ದೇಶನಾಲಯದ ಸೂಚನೆಯಂತೆ ಪ್ಲಾಸ್ಟಿಕ್ ಮುಕ್ತ ಅಭಿಯಾನದ ಭಾಗವಾಗಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪಟ್ಟಣದ ಸಂತೆ ಮಾರುಕಟ್ಟೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಎರಡೂವರೆ ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದು, ವರ್ತಕರಿಗೆ ೧೨೦೦ ರೂ. ದಂಡ ವಿಧಿಸಿದ್ದಾರೆ.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಅವರ ಸೂಚನೆಯಂತೆ, ಆರೋಗ್ಯಾಧಿಕಾರಿ ಜಾಸಿಂ ಖಾನ್, ಅಧಿಕಾರಿ ಜೀವನ್ ಸೇರಿದಂತೆ ಸಿಬ್ಬಂದಿಗಳ ತಂಡ ಪಟ್ಟಣದ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂದರ್ಭ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮಾಡುತ್ತಿದ್ದ ಪ್ರಕರಣಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ.

ಇದೇ ಸಂದರ್ಭ ಅಂಗಡಿ ಮಾಲೀಕರುಗಳಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು, ಮುಂದಿನ ದಿನಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಬಾರದು. ಅಂಗಡಿಗೆ ಬರುವ ಗ್ರಾಹಕರಿಗೆ ಕೈ ಚೀಲವನ್ನು ತರುವಂತೆ ತಿಳಿಹೇಳಬೇಕು. ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿಸಲು ಸಹಕರಿಸಬೇಕೆಂದು ಆರೋಗ್ಯಾಧಿಕಾರಿ ಜಾಸಿಂ ಖಾನ್ ಸೂಚಿಸಿದರು.