ಗೋಣಿಕೊಪ್ಪಲು, ಜು. ೧೯: ಕಾಫಿ ತೋಟದ ಕೆರೆಯಲ್ಲಿ ಮುಳುಗಿ ಕಾರ್ಮಿಕ ಮೃತಪಟ್ಟ ಘಟನೆ ಗೋಣಿಕೊಪ್ಪ ಸಮೀಪದ ಕೈಕೇರಿ ಬಳಿ ಸಂಭವಿಸಿದೆ. ಮೃತಪಟ್ಟ ವ್ಯಕ್ತಿ ಕೇರಳ ರಾಜ್ಯದ ಮಾನಂದವಾಡಿಯ ಸಂಪತ್ (೨೬) ಎಂದು ಗುರುತಿಸಲಾಗಿದೆ.
ಕೂಲಿ ಕೆಲಸಕ್ಕೆ ಬಂದಿದ್ದ ಮಾನಂದವಾಡಿಯ ಸಂಪತ್ ತನ್ನ ನಾಲ್ಕು ಮಂದಿ ಸ್ನೇಹಿತರೊಂದಿಗೆ ಕೈಕೇರಿ ಗ್ರಾಮದ ಕುಪ್ಪಂಡ ಕುಟುಂಬಕ್ಕೆ ಸೇರಿದ ಕಾಫಿ ತೋಟದಲ್ಲಿರುವ ಕೆರೆಗೆ ಇಳಿದು ಆಟವಾಡಿದ್ದಾರೆ. ಕೆರೆಯಲ್ಲಿ ಈಜುವ ವೇಳೆ ಕೆಸರಿನಲ್ಲಿ ಸಿಲುಕಿಕೊಂಡು ಹೊರ ಬಾರದೇ ಸಂಪತ್ ಮೃತಪಟ್ಟಿದ್ದಾನೆ.
ಉಳಿದ ಸ್ನೇಹಿತರು ಕೆರೆಯಲ್ಲಿ ಈಜಿ ದಡ ತಲುಪಿದ್ದಾರೆ. ಸಂಜೆ ವೇಳೆಯಲ್ಲಿ ಮೃತಪಟ್ಟ ಸಂಪತ್ ದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿಗಳ ಸಹಾಯದಿಂದ ಹೊರ ತೆಗೆಯಲಾಯಿತು. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದರು.