ಶನಿವಾರಸಂತೆ, ಜು. ೧೯: ಬುಧವಾರ ಆರಂಭವಾದ ಪುಷ್ಯ ಮಳೆ ಬೆಳಗ್ಗಿನಿಂದಲೇ ಧಾರಾಕಾರ ಸುರಿಯಿತು. ಮಳೆಗಾಗಿ ಹಂಬಲಿಸುತ್ತಿದ್ದ ರೈತರ ಆತಂಕ ಕಡಿಮೆಯಾದರೂ ಬಿಡದೆ ಸುರಿಯುತ್ತಿರುವ ಮಳೆ ಗದ್ದೆ ಕೆಲಸಕ್ಕೆ ಅಡ್ಡಿ ಉಂಟು ಮಾಡಿತು.
ಮಳೆಯೇನೋ ಸುರಿಯಿತು ಆದರೆ, ನಾಟಿ ಮಾಡಲು ಸಿದ್ಧತೆ ನಡೆಸಿದ್ದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದ್ರೆ ಗ್ರಾಮದ ರೈತ ಎಂ.ಕೆ.ರಸಿಕ ಅವರ ೨ ಎಕರೆ ಗದ್ದೆಯಲ್ಲಿ ಬೆಳೆದು ನಿಂತಿದ್ದ ತುಂಗ ಭತ್ತದ ಸಸಿಮಡಿಯನ್ನು ಮಂಗಳವಾರ ರಾತೋರಾತ್ರಿ ಕಾಡಾನೆಗಳ ಹಿಂಡು ದಾಳಿ ಮಾಡಿ ಸಂಪೂರ್ಣ ನಾಶಪಡಿಸಿವೆ.
ಇತ್ತೀಚಿನ ವರ್ಷಗಳಲ್ಲಿ ರೈತರು ಭತ್ತದ ವ್ಯವಸಾಯ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದರೂ ಕೆಲ ರೈತರು ವ್ಯವಸಾಯ ನಿಲ್ಲಬಾರದು. ತಿನ್ನುವ ಅನ್ನಕ್ಕೆ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಲಾಭವಿಲ್ಲದಿದ್ದರೂ ಭತ್ತ ಬೆಳೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಾ ಸಸಿಮಡಿ ಬೆಳೆದು ನಾಟಿ ಮಾಡಲು ಸಿದ್ಧತೆ ಮಾಡಿಕೊಂಡಾಗಲೇ ಆನೆಗಳ ಹಿಂಡು ನುಗ್ಗಿ ಸಸಿಮಡಿ ಧ್ವ್ವಂಸ ಮಾಡಿವೆಯಲ್ಲ ಎಂದು ಆನೆಗಳ ಉಪಟಳದಿಂದ ನಿರಾಶೆಗೊಂಡ ಮಾದ್ರೆ ಗ್ರಾಮದ ಯುವ ರೈತ ರಸಿಕ ಬೇಸರ ವ್ಯಕ್ತಪಡಿಸಿದರು.
ನೆರೆಯ ಯಸಳೂರು ಅರಣ್ಯದಿಂದ ಆನೆಗೇಟ್ ಮೂಲಕ ಬರುತ್ತಿರುವ ಕಾಡಾನೆಗಳ ಹಿಂಡು ೧ ವರ್ಷದಿಂದಲೂ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ರಾತ್ರಿ ವೇಳೆ ಸಂಚರಿಸುತ್ತಾ ಬೆಳೆ ನಾಶ ಪಡಿಸುತ್ತಿವೆ. ಅರಣ್ಯ ಇಲಾಖೆ ಕ್ರಮ ಕೈಗೊಂಡು ಅರಣ್ಯದತ್ತ ಓಡಿಸಿದರೂ ಪ್ರಯೋಜನವಿಲ್ಲ. ಭತ್ತ ಬೆಳೆಯುವ ಆಸಕ್ತಿಯನ್ನೇ ರೈತರು ಕಳೆದುಕೊಂಡಿದ್ದು ಕೆಲ ಯುವ ರೈತರು ಆಸಕ್ತಿ ತೋರಿಸುತ್ತಿರುವಾಗ ಒಂದೆಡೆ ಹವಾಮಾನ ವೈಪರೀತ್ಯ ಮತ್ತೊಂದೆಡೆ ಕಾಡಾನೆಗಳ ಉಪಟಳದಿಂದ ಬೇಸತ್ತು ಹೋಗಿದ್ದಾರೆ ಎಂದು ಅಪ್ಪಶೆಟ್ಟಳ್ಳಿ ಗ್ರಾಮದ ಯುವ ಬೆಳೆಗಾರ ಎ.ಎಚ್. ಚಂದ್ರಕಾAತ್ ಅಭಿಪ್ರಾಯಪಟ್ಟರು. ಸಂಬAಧಪಟ್ಟ ಅಧಿಕಾರಿಗಳು, ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಮಳೆಗಾಲದಲ್ಲೂ ತೋಟ-ಗದ್ದೆಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುತ್ತಿರುವ ಕಾಡಾನೆಗಳ ಉಪಟಳವನ್ನು ತಡೆಗಟ್ಟುವಂತೆ ರೈತರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.