ಸೋಮವಾರಪೇಟೆ, ಜು. ೧೯: ಒಕ್ಕಲುತನವನ್ನು ಮಾಡುವ ಒಕ್ಕಲಿಗರಿಗೆ ಮನೋರಂಜನೆ ನೀಡುವ ಉದ್ದೇಶದಿಂದ ಹಾಗೂ ೫೧೪ನೇ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ತಾಲೂಕು ಒಕ್ಕಲಿಗರ ಯುವ ವೇದಿಕೆ ವತಿಯಿಂದ ೮ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವನ್ನು ತಾ.೩೦ರಂದು ಶನಿವಾರಸಂತೆ ಸಮೀಪವಿರುವ ಮೂದ್ರವಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಕೆ.ಬಿ.ಸುರೇಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರಸಂತೆ, ಕೊಡ್ಲಿಪೇಟೆಯ ಮುಖ್ಯರಸ್ತೆಯ ಮೂದ್ರವಳ್ಳಿ ಗ್ರಾಮದ ಸಮುದಾಯಭವನದ ಹಿಂಭಾಗದಲ್ಲಿರುವ ಕೃಷಿಕ ರಾಕೇಶ್ ಅವರ ಗದ್ದೆಯಲ್ಲಿ ಬೆಳಿಗ್ಗೆ ೯ ಗಂಟೆಗೆ ಕ್ರೀಡಾಸ್ಪರ್ಧೆಗಳು ಪ್ರಾರಂಭವಾಗಲಿವೆ ಎಂದು ಮಾಹಿತಿ ನೀಡಿದರು.

ಪುರುಷರಿಗೆ ಹಗ್ಗಜಗ್ಗಾಟ (೯ ಮಂದಿ), ವಾಲಿಬಾಲ್ (೬ಮಂದಿ), ಗದ್ದೆ ಓಟ, ಮಹಿಳೆಯರಿಗೆ ಥ್ರೋಬಾಲ್ (೯ ಮಂದಿ), ಹಗ್ಗಜಗ್ಗಾಟ, ಗದ್ದೆ ಓಟ, ೪೦ ವರ್ಷ ಮೇಲ್ಪಟ್ಟ ಹಾಗೂ ಹಿರಿಯ ನಾಗರಿಕರಿಗೆ ಓಟ, ಗಂಡ ಹೆಂಡತಿ ಓಟ ಹಾಗೂ ಮಕ್ಕಳಿಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.

ಕ್ರೀಡಾಸ್ಪರ್ಧೆಗಳು ಒಕ್ಕಲಿಗರಿಗೆ ಮಾತ್ರ ಸೀಮಿತವಾಗಿದ್ದು, ಅದ್ದೂರಿಯಾಗಿ ನಡೆಯಲಿದೆ. ಪ್ರತಿ ಸ್ಪರ್ಧೆಗಳಿಗೂ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ: ೯೪೮೨೦೯೧೫೯೭, ೮೯೭೧೮೩೭೧೪೦ ಸಂಪರ್ಕಿಸಬಹುದು ಎಂದು ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಎಚ್.ಕೆ. ಪೃಥ್ವಿ, ಕಾರ್ಯದರ್ಶಿ ಚೌಡ್ಲು ಯೋಗೇಂದ್ರ, ಪದಾಧಿಕಾರಿಗಳಾದ ಎಸ್.ಪಿ. ಶ್ರೀಹರಿ, ಕೆ.ಎ. ಪ್ರಕಾಶ್ ಉಪಸ್ಥಿತರಿದ್ದರು.