ಕೂಡಿಗೆ, ಜು. ೧೮: ಯಾವುದೇ ದೇಶವು ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಮುಖ್ಯ ಪಾತ್ರ ವಹಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸಮೀಪದ ಹೆಬ್ಬಾಲೆ ಗ್ರಾಮದಲ್ಲಿರುವ ಸೇಕ್ರೆಡ್ ಹಾರ್ಟ್ ಆಂಗ್ಲ ಭಾಷೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶೀಯ ಸಂಸ್ಕಾರದೊAದಿಗೆ ಆಂಗ್ಲ ಭಾಷೆ ಸೇರಿದಂತೆ ಮಾತೃ ಭಾಷೆಯ ಸಂಸ್ಕಾರವನ್ನು ಮೈಗೂಡಿಸಿಕೊಂಡಿದ್ದ ಸ್ವಾಮಿ ವಿವೇಕಾನಂದರು ಭಾರತಕ್ಕೆ ಗೌರವ ತರುವಂತೆ ಮಾಡಿದರು ಎಂದು ಶಿಕ್ಷಣದ ಮೌಲ್ಯದ ಬಗ್ಗೆ ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ, ಕೆ.ಇ.ಬಿ. ನಿವೃತ್ತ ಕಾರ್ಯಪಾಲಕ ಅಭಿಯಂತರ ಜಿ.ಎಲ್. ರಾಮಪ್ಪ, ಜ್ಞಾನ ಕಾವೇರಿ ಕೊಡಗು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಲೋಕೇಶ್ ಭರಣಿ, ಹೆಬ್ಬಾಲೆ ಕೆನರಾ ಬ್ಯಾಂಕ್ನ ಸಹಾಯಕ ವ್ಯವಸ್ಥಾಪಕ ಸೂರ್ಯ, ಹೋಬಳಿ ಕ.ಸಾ.ಪ.ದ ಪದಾಧಿಕಾರಿಗಳಾದ ಉದಯಕುಮಾರ್, ಶಾಂಭವಮೂರ್ತಿ, ಎಂ.ಎನ್. ಮೂರ್ತಿ, ಉಮೇಶ್, ಮುಖ್ಯ ಶಿಕ್ಷಕಿ ಲೇಖ ಜಾನ್, ಶಾಲಾ ವ್ಯವಸ್ಥಾಪಕ ಹೆಚ್.ಎಸ್. ಲೋಕೇಶ್ ಉಪಸ್ಥಿತರಿದ್ದರು.
ಶಿಕ್ಷಕಿ ಪ್ರಿಯಾಂಕ್ ಕಾರ್ಯಕ್ರಮ ನಿರೂಪಿಸಿ, ಸಜೀನಿ ಸ್ವಾಗತಿಸಿ, ವಂದಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ವನ ಮಹೋತ್ಸವವನ್ನು ಆಚರಣೆ ಮಾಡಲಾಯಿತು.