ಮಡಿಕೇರಿ, ಜು. ೧೮: ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಕುಸಿತ ಪ್ರಕರಣಕ್ಕೆ ಸಂಬAಧಿಸಿದAತೆ ಲೋಕಾಯುಕ್ತ ಮುಖ್ಯ ಅಭಿಯಂತರರ ಕಚೇರಿಯಿಂದ ತನಿಖಾಧಿಕಾರಿಯಾಗಿ ನಿಯೋಜನೆಗೊಂಡಿರುವ ಕಾರ್ಯಪಾಲಕ ಅಭಿಯಂತರ ಆರ್. ರವಿಶಂಕರ್ ಅವರು ಇಂದು ತಡೆಗೋಡೆಯನ್ನು ಪರಿಶೀಲನೆ ನಡೆಸಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನೀರಾ ಮೈನಾ, ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಕಾಮಗಾರಿ ಕಳಪೆಯಾಗಿದ್ದು, ಇದನ್ನು ನಿರ್ಮಿಸಿದ ಲೋಕೋಪಯೋಗಿ ಇಲಾಖೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು, ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಕಿರಿಯ ಅಭಿಯಂತರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಮುಖ್ಯ ಅಭಿಯಂತರರ ಕಚೇರಿಯಿಂದ ಲೋಕಾಯುಕ್ತದ ತನಿಖಾಧಿಕಾರಿಗಳಾದ ಕಾರ್ಯಪಾಲಕ ಅಭಿಯಂತರ ಆರ್. ರವಿಶಂಕರ್ ಅವರನ್ನು ತಡೆಗೋಡೆ ಕಾಮಗಾರಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿತ್ತು. ರವಿಶಂಕರ್ ಅವರು ಇಂದು ತಡೆಗೋಡೆಯನ್ನು ಪರಿಶೀಲನೆ ಮಾಡಿದರು. ಅಲ್ಲದೆ ಸಂಬAಧಿಸಿದ ಇಲಾಖಾಧಿಕಾರಿಗಳಿಂದ ಕಾಮಗಾರಿಯ ಕುರಿತಾಗಿ ಸಮಗ್ರ ಮಾಹಿತಿ ಸಂಗ್ರಹಿಸಿದರು.

(ಮೊದಲ ಪುಟದಿಂದ) ಈ ಸಂದರ್ಭ ದೂರುದಾರರಾದ ತೆನ್ನೀರಾ ಮೈನಾ, ತಡೆಗೋಡೆ ಹಿಂಬದಿ ತುಂಬಲಾದ ಮಣ್ಣನ್ನು ನಿಯಮಾನುಸಾರ ಗಟ್ಟಿಗೊಳಿಸಿಲ್ಲ. ಮಣ್ಣನ್ನು ತುಂಬುವಾಗ ಜಿಯೋ ಫ್ಯಾಬ್ರಿಕೇಷನ್ ಪ್ರಕ್ರಿಯೆ ನಡೆಸಿಲ್ಲ. ಕಾಮಗಾರಿಯಲ್ಲಿ ಫಿಲ್ಟರ್ ಮೀಡಿಯಾ ಕ್ರಮ ಬದ್ಧವಾಗಿಲ್ಲ. ಪ್ಯಾನಲ್‌ಗಳ ತಯಾರಿಕೆಯಲ್ಲಿ ಗುಣಮಟ್ಟದ ಬಗ್ಗೆ ಪರೀಕ್ಷೆ ನಡೆದಿಲ್ಲ. ಪ್ಯಾನೆಲ್ ನೆಯಿಲಿಂಗ್, ರಾಡ್ ಅಳವಡಿಕೆ, ಬೆಲ್ಟ್ ಮತ್ತು ಕೇಬಲ್‌ಗಳು ಕ್ರಮಬದ್ಧವಾಗಿ ಅಳವಡಿಸಲ್ಪಟ್ಟಿಲ್ಲ. ಕಾಮಗಾರಿಯ ಪ್ರಗತಿಯ ಬಗ್ಗೆ ಪ್ರತಿ ಹಂತದಲ್ಲೂ ಪರಿಶೀಲನೆ ನಡೆಸಿ ವರದಿ ಒಪ್ಪಿಸುವ ಪ್ರಕ್ರಿಯೆ ನಡೆಯದೇ ಇರುವುದು ಕಾಮಗಾರಿ ಕಳಪೆಯಾಗಲು ಕಾರಣ ಎಂದು ತನಿಖಾಧಿಕಾರಿ ಎದುರು ವಿವರಿಸಿದರು.

ಈ ಸಂದರ್ಭ ಆರೋಪಿಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ತನಿಖಾಧಿಕಾರಿ ಸ್ಪಷ್ಟನೆ ಬಯಸಿದಾಗ ಮಾಹಿತಿ ನೀಡುವ ವೇಳೆ ಅಧಿಕಾರಿಗಳು, ವಿನ್ಯಾಸ ತಜ್ಞರು ಗೊಂದಲಕ್ಕೊಳಗಾಗುತ್ತಿದ್ದುದು ಕಂಡು ಬಂತು. ನಂತರ ತಡೆಗೋಡೆ ಹಿಂಬದಿ ತುಂಬಲಾಗಿದ್ದ ಮಣ್ಣನ್ನು ಪರೀಕ್ಷೆಗಾಗಿ ಕೊಂಡೊಯ್ಯಲಾಯಿತು.

ಲೋಕಾಯುಕ್ತದ ಗುಣಮಟ್ಟದ ಖಾತರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಡಿ.ಎಂ. ಗಿರೀಶ್, ಕಿರಿಯ ಅಭಿಯಂತರ ಸುಬ್ಬಯ್ಯ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಸಿದ್ದೇಗೌಡ, ಈ ಹಿಂದಿನ ಕಾರ್ಯಪಾಲಕ ಅಭಿಯಂತರ ನಾಗರಾಜು, ನಿವೃತ್ತ ಅಭಿಯಂತರ ಮದನ್ ಮೋಹನ್, ನಿವೃತ್ತ ಸಹಾಯಕ ಅಭಿಯಂತರ ಶಿವರಾಂ ಈ ಪ್ರಕರಣದಲ್ಲಿ ಈಗಾಗಲೇ ಅಮಾನತುಗೊಂಡಿರುವ ಕಿರಿಯ ಅಭಿಯಂತರ ದೇವರಾಜ್ ಮತ್ತಿತರರು ಹಾಜರಿದ್ದರು.