ಮಡಿಕೇರಿ, ಜು. ೧೮: ನಗರದ ಜಿಲ್ಲಾಸ್ಪತ್ರೆಯಲ್ಲಿ ಕಣ್ಣಿನ ಶಸ್ತçಚಿಕಿತ್ಸೆಗೆಂದು ದಾಖಲಾಗಿದ್ದ ಹಿರಿಯ ವೈದ್ಯರೊಬ್ಬರು ಮಹಡಿಯಿಂದ ಕೆಳಗೆ ಬಿದ್ದು ಸಾವಿಗೀಡಾಗಿದ್ದಾರೆ. ಮೃತರ ಕಡೆಯವರು ಆಸ್ಪತ್ರೆ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಅಭ್ಯತ್ಮಂಗಲದ ಒಂಟಿಯAಗಡಿ ನಿವಾಸಿ, ಸಿದ್ದಾಪುರದ ಪ್ರಖ್ಯಾತ ವೈದ್ಯರಾಗಿದ್ದ ಕೆ. ಪೂಣಚ್ಚ (ಬಾಬಿ-೮೦) ಸಾವನ್ನಪ್ಪಿದ ವ್ಯಕ್ತಿ.
ಘಟನೆ ಹಿನ್ನೆಲೆ
ಕಣ್ಣಿನ ಪೊರೆ ಶಸ್ತçಚಿಕಿತ್ಸೆಗೆಂದು ತಾ. ೧೭ ರಂದು ಪೂಣಚ್ಚ ಅವರು ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿ ದಾಖಲಾಗಿ ತಾ. ೧೮ ರಂದು ಶಸ್ತçಚಿಕಿತ್ಸೆ ನಡೆಯಬೇಕಾಗಿತ್ತು.
ಹಿಂದಿನ ದಿನ ರಾತ್ರಿ ೧೦ ಗಂಟೆಯ ತನಕ ಪೂಣಚ್ಚ ಅವರ ಚಾಲಕ ವಾರ್ಡ್ನಲ್ಲಿ ಜೊತೆಗಿದ್ದರು. ಬಳಿಕ ಚಾಲಕ ನಿದ್ರೆ ಮಾಡಲು ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿದ ಕಾರು ಬಳಿ ತೆರಳಿದ್ದಾರೆ. ವಾರ್ಡ್ನಲ್ಲಿದ್ದ ಪೂಣಚ್ಚ ಅವರು ನಡುರಾತ್ರಿ ಶೌಚಾಲಯಕ್ಕೆಂದು ಹೊರಬಂದವರು ಆಕಸ್ಮಿಕವಾಗಿ ಮಹಡಿಯ ಮೆಟ್ಟಿಲು ಹತ್ತಿ ಮೇಲ್ಭಾಗಕ್ಕೆ ತೆರಳಿರಬಹುದು ಎಂದು ಊಹಿಸಲಾಗಿದ್ದು, ಈ ಸಂದರ್ಭ ಮೇಲಿನಿಂದ ಬಿದ್ದು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಬೆಳಿಗ್ಗೆ ೫.೩೦ ಗಂಟೆಗೆ ಪೂಣಚ್ಚ ಅವರು ನಾಪತ್ತೆಯಾಗಿರುವುದು ಸಿಬ್ಬಂದಿಗಳಿಗೆ ತಿಳಿದು ಬಂದಿದೆ. ವಿಚಾರವನ್ನು ಸಿಬ್ಬಂದಿಗಳು ಕುಟುಂಬಕ್ಕೆ ತಿಳಿಸಿದ್ದು, ತಕ್ಷಣ ಆಗಮಿಸಿದ ಕುಟುಂಬಸ್ಥರು ಪೂಣಚ್ಚ ಅವರಿಗಾಗಿ ಹುಡುಕಾಟ ನಡೆಸಿದಾಗ ೪ನೇ ಮಹಡಿಯಿಂದ ೫೦ ಅಡಿ ಕೆಳ ಭಾಗದ ಲಿಫ್ಟ್ ಬಳಿ ಮಳೆಯ ನಡುವೆ ಮೃತದೇಹ ಬಿದ್ದಿರುವುದು ಗೋಚರಿಸಿದೆ.
(ಮೊದಲ ಪುಟದಿಂದ) ಆಸ್ಪತ್ರೆಯಲ್ಲಿ ಸಮರ್ಪಕ ಭದ್ರತೆ ವಹಿಸದ ಹಿನ್ನೆಲೆ ಈ ಘಟನೆ ಸಂಭವಿಸಿದೆ ಎಂದು ಪುತ್ರಿ ಕ್ಷೀರಾ ಆರೋಪ ಮಾಡಿದ್ದಾರೆ. ಮಹಡಿಗೆ ತೆರಳುವ ಬಾಗಿಲನ್ನು ಮುಚ್ಚದೆ, ವಾರ್ಡ್ನಲ್ಲಿ ಸಿಬ್ಬಂದಿಗಳಿಲ್ಲದ ಪರಿಣಾಮ ಸಾವು ಉಂಟಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಈ ಸಂಬAಧ ಮಡಿಕೇರಿ ಪೊಲೀಸ್ ಠಾಣೆಗೆ ಮೃತರ ಪತ್ನಿ ಗಾನವತಿ ನೀಡಿದ ದೂರಿನಡಿ ಪ್ರಕರಣ ದಾಖಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತರ ಮಕ್ಕಳು ವಿದೇಶದಲ್ಲಿರುವ ಹಿನ್ನೆಲೆ ತಾ. ೨೦ ರಂದು ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಜಿಲ್ಲಾಸ್ಪತ್ರೆ ಡೀನ್ ಡಾ. ಕಳ್ಳಿಚಂಡ ಕಾರ್ಯಪ್ಪ ಅವರನ್ನು ಘಟನೆ ಕುರಿತು ಪ್ರಶ್ನಿಸಿದಾಗ, ಸಿಬ್ಬಂದಿಗಳ ಕೊರತೆ ಇರುವುದು ನಿಜ. ಮಹಡಿ ಮೇಲೆ ನೀರಿನ ಮಟ್ಟ ಪರಿಶೀಲಿಸಲು ಸಿಬ್ಬಂದಿಗಳು ತೆರಳುತ್ತಿರುತ್ತಾರೆ. ಈ ಹಿನ್ನೆಲೆ ಬೀಗ ಹಾಕಿರಲಿಲ್ಲ. ಮುಂದಿನ ದಿನಗಳಲ್ಲಿ ತಪ್ಪು ತಲೆದೋರದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.