ಕುಶಾಲನಗರ, ಜು. ೧೮: ಕುಶಾಲನಗರ ತಾಲೂಕು ತಹಶೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಂಗಳವಾರ ದಿಢೀರ್ ಭೇಟಿ ನೀಡಿದರು. ಮಡಿಕೇರಿಯಿಂದ ಸೋಮವಾರಪೇಟೆಗೆ ತೆರಳುವ ಮಾರ್ಗ ಮಧ್ಯೆ ಕಚೇರಿಗೆ ಭೇಟಿ ನೀಡಿದ ಅವರು ತಾಲೂಕು ಕಚೇರಿಯ ವಿವಿಧ ವಿಭಾಗಗಳ ದಾಖಲೆಗಳ ಪರಿಶೀಲನೆ ನಡೆಸಿದರು.
ನಂತರ ಕುಶಾಲನಗರ ಗುಂಡೂರಾವ್ ಬಡಾವಣೆಯಲ್ಲಿ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಮೀಸಲಿರಿಸಿರುವ ಜಾಗಕ್ಕೆ ಭೇಟಿ ನೀಡಿ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಗುಂಡೂರಾವ್ ಬಡಾವಣೆಯಲ್ಲಿ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ೨.೮೮ ಎಕರೆ ಜಾಗ ಮೀಸಲಿರಿಸಿದ್ದು, ತಾಲೂಕು ಭವನ ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಪ್ರಕಾಶ್ ತಿಳಿಸಿದ್ದಾರೆ.