ಶನಿವಾರಸಂತೆ, ಜು.೧೮: ಆರಂಭದಲ್ಲಿ ಅಬ್ಬರಿಸಿ ಸುರಿದ ಪುನರ್ವಸು ಮಳೆ ನಂತರ ಕ್ಷೀಣಿಸುತ್ತಾ ಕೊನೆಯ ದಿನ ಮಂಗಳವಾರದವರೆಗೂ ಕ್ಷಣ ಬಿಸಿಲು-ಕ್ಷಣ ಮಳೆಯೊಂದಿಗೆ ಕಣ್ಣಾಮುಚ್ಚಾಲೆಯಾಡಿತು. ಪುನರ್ವಸು ಮಳೆಯೂ ಕೈಕೊಟ್ಟ ಕಾರಣ ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಭತ್ತದ ಬೀಜ ಬಿತ್ತನೆ ಹಾಗೂ ನಾಟಿ ಕಾರ್ಯವನ್ನು ನೀರಾವರಿ ಸೌಲಭ್ಯವಿದ್ದ ಬೆರಳೆಣಿಕೆಯ ರೈತರು ಮಾತ್ರ ಮಾಡಿದ್ದಾರೆ. ಉಳಿದಂತೆ ಬಹುತೇಕ ರೈತರು ತಾ.೧೯ರಿಂದ ಆರಂಭವಾಗುವ ಪುಷ್ಯ ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಕಳೆದ ವರ್ಷ ಈ ಅವಧಿಗೆ ೩೪.೧೭ ಇಂಚು ಮಳೆಯಾಗಿತ್ತು. ಶೇ.೮೫ ರಷ್ಟು ರೈತರು ಭತ್ತದ ನಾಟಿ ಕಾರ್ಯ ಮುಗಿಸಿದ್ದರು. ಈ ವರ್ಷ ಪ್ರಾರಂಭದಿAದ ಈವರೆಗೆ ಕೇವಲ ೧೧ ಇಂಚು ಮಳೆಯಾಗಿದ್ದು, ನೀರಿನ ಅನುಕೂಲ ಇರುವ ಹಳ್ಳ ಗದ್ದೆ ಹೊಂದಿರುವ ಶೇ.೧೦ ರಷ್ಟು ರೈತರು ಭತ್ತ ಬಿತ್ತನೆ ಹಾಗೂ ನಾಟಿ ಕೆಲಸ ಮುಗಿಸಿದ್ದಾರೆ. ಶೇ.೯೦ ರಷ್ಟು ರೈತರು ಪುಷ್ಯ ಮಳೆಯ ನಿರೀಕ್ಷೆಯಲ್ಲಿ ಆಕಾಶದತ್ತ ಮೊಗ ಮಾಡಿದ್ದಾರೆ. ಗದ್ದೆಗಳಲ್ಲಿ ಉಳುಮೆಯನ್ನೂ ಮಾಡದ ಕೆಲ ರೈತರು ಪರ್ಯಾಯ ಬೆಳೆಯಾದ ಜೋಳ ಹಾಗೂ ರಾಗಿ ಬೆಳೆಯುವ ಚಿಂತನೆ ನಡೆಸಿದ್ದಾರೆ.

ಶನಿವಾರಸಂತೆ ಕೃಷಿ ಇಲಾಖೆಯಲ್ಲಿ ಹೆಚ್ಚಿನ ರೈತರು ಇಚ್ಛಿಸುವ ವಿಎನ್ ಆರ್.ಭತ್ತದ ಬೀಜ ಸಿಗದ ಕಾರಣ ಬೇರೆ ಕಡೆಯ ಕೃಷಿ ಇಲಾಖೆಯಿಂದ ಖರೀದಿಸಿ ಗದ್ದೆಯಲ್ಲಿ ಬಿತ್ತನೆ ಮಾಡಲು ತಡವಾಯಿತು. ಮಳೆಯೂ ಕೈಕೊಟ್ಟಿತು. ಈ ವ್ಯಾಪ್ತಿಯಲ್ಲಿ ೩ ತಿಂಗಳ ಅವಧಿಯ ವಿಎನ್ ಆರ್ ಹಾಗೂ ಅಡ್ವಂಟ್ ಭತ್ತದ ಬೀಜ ಬಿತ್ತನೆ ನಡೆದಿದ್ದು ಸಸಿಮಡಿ ಬೆಳೆದ ನಂತರ ೧೫ ದಿನಗಳೊಳಗೆ ನಾಟಿ ಮಾಡುತ್ತೇವೆ. ಮಾರಾಟಕ್ಕಿಂತಲೂ ಮನೆಮಂದಿ ಊಟ ಮಾಡಲಾದರೂ ಭತ್ತ ಬೆಳೆಯಲೇಬೇಕಲ್ಲಾ ಎಂದು ಕಾಜೂರು ಗ್ರಾಮದ ಪ್ರಗತಿಪರ ಕೃಷಿಕ ಚಂದ್ರಶೇಖರ್ ಅಳಲು ತೋಡಿಕೊಂಡರು.