ಶನಿವಾರಸAತೆ, ಜು. ೧೭: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಕರ, ಚಿಕ್ಕಾರ ಹಾಗೂ ಕೂಗೂರು ಗ್ರಾಮಗಳ ತೋಟಗಳಿಗೆ ನಿತ್ಯ ಲಗ್ಗೆ ಇಡುತ್ತಿರುವ ಕಾಡಾನೆಗಳು ಹಾಗೂ ಕಾಡುಕೋಣಗಳು ದಾಂಧಲೆ ಎಬ್ಬಿಸಿ ಕಾಫಿ ಗಿಡಗಳು ಮತ್ತು ಅಡಿಕೆ ಗಿಡಗಳನ್ನು ನಾಶಪಡಿಸುತ್ತಿವೆ ಎಂದು ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಶನಿವಾರ ರಾತ್ರಿ ಹಿರಿಕರ ಗ್ರಾಮದ ಕೃಷಿಕ ಎಚ್.ಎಸ್.ರಕ್ಷಿತ್ ಅವರ ತೋಟಕ್ಕೆ ನುಗ್ಗಿದ ಕಾಡಾನೆ ಹಾಗೂ ಕಾಡುಕೋಣಗಳು ೨೦ ಅಡಿಕೆ ಮರಗಳನ್ನು, ೮೦ ಕಾಫಿಗಿಡಗಳನ್ನು ಎಳೆದು ಹಾಕಿ ನಾಶಪಡಿಸಿವೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮಾಲAಬಿ ಮೀಸಲು ಅರಣ್ಯದಿಂದ ನಿತ್ಯ ರಾತ್ರಿ ವೇಳೆ ಸಂಚಾರ ಬರುತ್ತಿರುವ ವನ್ಯಜೀವಿಗಳು ಕೃಷಿಕರ ತೋಟಗಳಿಗೆ ನುಗ್ಗಿ ಬೆಳೆ ನಾಶ ಪಡಿಸುತ್ತಿರುವ ಬಗ್ಗೆ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಶನಿವಾರಸಂತೆ ವಲಯ ಅರಣ್ಯ ಇಲಾಖೆ ಕಾಡಿನ ಅಂಚಿನ ದೊಡ್ಡ ದೊಡ್ಡ ಬಂಡೆಕಲ್ಲುಗಳಿರುವ ಸ್ಥಳದಲ್ಲಿ ಸೋಲಾರ್ ತಂತಿಯನ್ನು ಅಳವಡಿಸಲಾಗಿದ್ದು ಅದನ್ನೂ ಲೆಕ್ಕಿಸದೇ ಆನೆಗಳು, ಕಾಡುಕೋಣಗಳು ಬರುತ್ತಿರುವ ಬಗ್ಗೆ ಕೃಷಿಕರು ಆತಂಕ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ಕ್ರಮ ಕೈಗೊಂಡು ಕಾಡು ಪ್ರಾಣಿಗಳನ್ನು ಕಾಡಿಗಟ್ಟುವಂತೆ ಆಗ್ರಹಿಸಿದ್ದಾರೆ.