ವರದಿ : ಚಂದ್ರಮೋಹನ್
ಕುಶಾಲನಗರ, ಜು. ೧೭: ಕೊಡಗು ಮತ್ತು ಮೈಸೂರು ಜಿಲ್ಲೆಗಳ ಗಡಿ ಭಾಗದ ಗುಡ್ಡೆಹೊಸೂರು ಬಳಿ ತೆಪ್ಪದ ಕಂಡಿ ತೂಗು ಸೇತುವೆ ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟಕ್ಕೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ಈ ಸೇತುವೆ ಮೇಲೆ ದ್ವಿಚಕ್ರವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದು ಕೆಲವು ದಂಧೆಕೋರರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಅಕ್ರಮ ಜೂಜಾಟ ಗಾಂಜಾ ಮಾರಾಟ ದಂಧೆಕೋರರು ಪೊಲೀಸರ ಕಾರ್ಯಾಚರಣೆ ಸಂದರ್ಭ ತಪ್ಪಿಸಿಕೊಳ್ಳಲು ಈ ರಹದಾರಿ ಬಹಳಷ್ಟು ಸಹಕಾರಿಯಾಗುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿವೆ. ಕುಶಾಲನಗರ ಪೊಲೀಸರ ತಂಡ ಅಕ್ರಮ ದಂಧೆಕೋರರ ಸುಳಿವಿನ ಮೇರೆಗೆ ದಾಳಿ ಮಾಡುವ ಸಂದರ್ಭ ನೆರೆಯ ಮೈಸೂರು ಜಿಲ್ಲೆಯ ಗ್ರಾಮಗಳ ಮೂಲಕ ಪರಾರಿಯಾಗಿ ಕಾನೂನಿನ ತೆಕ್ಕೆಯಿಂದ ತಪ್ಪಿಸಿ ಕೊಳ್ಳುತ್ತಿದ್ದಾರೆ ಎನ್ನುವ ಸಂಗತಿಗಳು ಬಯಲಾಗಿವೆ.
(ಮೊದಲ ಪುಟದಿಂದ) ಈ ಬಗ್ಗೆ ಈ ಹಿಂದೆ ಕೆಲವು ಪ್ರಕರಣಗಳು ನಡೆದ ಕಾರಣ ತೂಗು ಸೇತುವೆ ಮೇಲೆ ವಾಹನಗಳ ಓಡಾಟಕ್ಕೆ ಪೊಲೀಸ್ ಇಲಾಖೆಯ ಮೂಲಕ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಲಾಗಿತ್ತು. ನಂತರ ಅದನ್ನು ತೆರವುಗೊಳಿಸಲಾಗಿದೆ. ಈಗ ಮತ್ತೆ ವಾಹನ ಸಂಚಾರಕ್ಕೆ ಕಡಿವಾಣ ಹಾಕುವ ಬಗ್ಗೆ ಚಿಂತನೆ ಹರಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ ಕುಶಾಲನಗರ ಸಮೀಪದ ಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಗಾಂಜಾ ಬೆಳೆ ಬೆಳೆಯುವುದು, ಮಾರಾಟ ಮತ್ತು ಸರಬರಾಜು ಹೇರಳವಾಗಿ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದು ಇದಕ್ಕೆ ಕಡಿವಾಣ ಹಾಕುವಲ್ಲಿ ಸಂಬAಧಿಸಿದ ಅಧಿಕಾರಿಗಳು ವಿಫಲರಾಗಿದ್ದಾರೆ. ಕುಶಾಲನಗರದ ಕೆಲವು ಯುವಕರು ಐಷಾರಾಮಿ ವಾಹನಗಳಲ್ಲಿ ಬಂದು ಇಲ್ಲಿನ ಕೆಲವು ದಂಧೆ ಕೋರರಿಂದ ಗಾಂಜಾ ಮತ್ತಿತರ ಡ್ರಗ್ಸ್ ಖರೀದಿ ಮಾಡುತ್ತಿರುವ ಬಗ್ಗೆಯೂ ಸುಳಿವು ದೊರೆತಿದೆ.
ಇದೀಗ ವಿಶೇಷ ಪೊಲೀಸರ ಕಾರ್ಯಾಚರಣೆ ತಂಡ ಕೊಪ್ಪ ಗ್ರಾಮದ ವ್ಯಾಪ್ತಿಯಿಂದ ಡ್ರಗ್ ಪೆಡ್ಲರ್ ಒರಿಸ್ಸಾದ ಸೂರ್ಯಕಾಂತ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆದಲ್ಲಿ ಕೊಪ್ಪ ವ್ಯಾಪ್ತಿಯ ಅಕ್ರಮ ಗಾಂಜಾ ದಂಧೆ ಕೋರರ ಸುಳಿವು ಬಯಲಾಗಲಿದೆ.
ಕೊಪ್ಪ ಗ್ರಾಮದಲ್ಲಿ ಹೊರ ರಾಜ್ಯದ ಅನೇಕ ನಿರಾಶ್ರಿತರು ಕಾರ್ಮಿಕರ ಸೋಗಿನಲ್ಲಿ ನೆಲೆ ಕಾಣುತ್ತಿದ್ದು ಇವರುಗಳು ಗಾಂಜಾ ಮತ್ತಿತರ ಹಲವು ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಎರಡು ಜಿಲ್ಲೆಗಳ ಗಡಿ ಭಾಗವಾದ ಕಾರಣ ತಪ್ಪಿಸಿಕೊಳ್ಳಲು ಅನೇಕ ದಾರಿಗಳಿದ್ದು ಅಕ್ರಮ ದಂಧೆಗಳು ನಿರಾತಂಕವಾಗಿ ನಡೆಯುತ್ತಿದೆ.
ಈ ಬಗ್ಗೆ ‘ಶಕ್ತಿ' ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರಲ್ಲಿ ಪ್ರತಿಕ್ರಿಯೆ ಬಯಸಿದಾಗ ಈ ಬಗ್ಗೆ ಈಗಾಗಲೇ ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕರ ಗಮನಕ್ಕೆ ತರಲಾಗಿದೆ. ಎರಡು ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಕೇರಳ ಗಡಿ ಭಾಗದಲ್ಲಿ ಇದೇ ರೀತಿ ಆಗಾಗ್ಗೆ ಅಧಿಕಾರಿಗಳ ಸಭೆ ಕರೆಯಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೊಡಗು ಮತ್ತು ಮೈಸೂರು ಜಿಲ್ಲೆಗಳ ಗಡಿ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳ ಶಾಶ್ವತ ಕಡಿವಾಣಕ್ಕೆ ಸ್ಥಳೀಯ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಯುವ ಪೀಳಿಗೆಯ ಮತ್ತು ಸಮಾಜದ ನೆಮ್ಮದಿ ಕೆಡಿಸುತ್ತಿರುವ ದಂಧೆಕೋರರನ್ನು ಹುಡುಕುವ ಕೆಲಸ ತಕ್ಷಣ ಆಗಬೇಕಾಗಿದೆ.