ಚೆಯ್ಯಂಡಾಣೆ, ಜು. ೧೭: ವೀರಾಜಪೇಟೆ ತಾಲೂಕಿನ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಚಾಮಿಯಾಲ ದೇವಣಗೆರಿ ರಸ್ತೆ ತೀವ್ರ ರೀತಿಯಲ್ಲಿ ಹದಗೆಟ್ಟಿದ್ದು ವಾಹನ ಸವಾರರು ತೆರಳಲು ಹರ ಸಾಹಸ ಪಡುತ್ತಿದ್ದಾರೆ.
ಇದರ ಬಗ್ಗೆ ಮಾಧ್ಯಮದಲ್ಲಿ ಹಲವಾರು ಬಾರಿ ವರದಿಗಳು ಕೂಡ ಪ್ರಕಟವಾಗಿತ್ತು. ಈ ರಸ್ತೆಯಲ್ಲಿ ಹಲವಾರು ಖಾಸಗಿ ಶಾಲಾ ಕಾಲೇಜು ವಾಹನಗಳು ನಿತ್ಯ ತೆರಳುತ್ತವೆ.
ಆದರೂ ಕೂಡ ಸಂಬAಧಪಟ್ಟ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರೇ ಹಣ ಸಂಗ್ರಹಿಸಿ ಇಂದು ರಸ್ತೆಯ ಗುಂಡಿಗಳಿಗೆ ಕಲ್ಲು ಮಣ್ಣುಗಳನ್ನು ಹಾಕಿ ತಾತ್ಕಾಲಿಕವಾಗಿ ವಾಹನ ಸಂಚರಿಸಲು ಅನುವು ಮಾಡಿದರು.
ಗ್ರಾಮಸ್ಥರು ವೀರಾಜಪೇಟೆ ಕ್ಷೇತ್ರದ ಶಾಸಕರನ್ನು ರಸ್ತೆ ಸಮಸ್ಯೆ ಬಗ್ಗೆ ಭೇಟಿಯಾದ ಸಂದರ್ಭ ಮಳೆ ಸ್ವಲ್ಪ ಬಿಡುವು ನೀಡಿದ ನಂತರ ರಸ್ತೆಯ ಕಾಮಗಾರಿ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತ್ರಿವೇಣಿ ಶಾಲೆಯ ೬ನೇ ತರಗತಿ ವಿದ್ಯಾರ್ಥಿ ಅರ್ಷಾಪ್ ಗ್ರಾಮಸ್ಥರೊಂದಿಗೆ ಸೇರಿ ಗುಂಡಿ ಮುಚ್ಚುವ ಕಾರ್ಯದಲ್ಲಿ ಮಗ್ನನಾಗಿದ್ದು, ‘‘ನನ್ನ ಶಾಲಾ ಬಸ್ ಈ ಮಾರ್ಗವಾಗಿ ಸಂಚರಿಸಲು ತುಂಬಾ ತೊಡಕಾಗಿದ್ದು ಇದನ್ನು ಮನಗಂಡು ನಾನು ಕೂಡ ಸಹಕರಿಸಿದ್ದೇನೆ’’ ಎಂದರು.
ಈ ಸಂದರ್ಭ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.