ಮಡಿಕೇರಿ, ಜು. ೧೭: ಆಯುರ್ವೇದ ಅಕಾಡೆಮಿ, ಬೆಂಗಳೂರು ಮತ್ತು ನೀಮಾ, ಕೊಡಗು ಸಹಯೋಗದಲ್ಲಿ ಅನ್ವಯ ಆಯುರ್ವೇದ ಮತ್ತು ಪಂಚಕರ್ಮ ಕೇಂದ್ರ ವತಿಯಿಂದ ಉಚಿತ ಮಧುಮೇಹ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿಯಾಗಿ ನಡೆಯಿತು.
ಇದರಲ್ಲಿ ಮಧುಮೇಹಿಗಳು ಮಾತ್ರವಲ್ಲದೆ ಇನ್ನಿತರರು ಭಾಗವಹಿಸಿ ಆಯುರ್ವೇದ ಆಹಾರ ಮತ್ತು ಜೀವನಶೈಲಿಯ ಬಗ್ಗೆ ವೈದ್ಯರೊಡನೆ ಉಚಿತ ಸಮಾಲೋಚನೆ ನಡೆಸಿದರು.
ಶಿಬಿರದಲ್ಲಿ ಕೊಡಗಿನ ನೀಮಾ ಅಧ್ಯಕ್ಷೆ ಡಾ. ಅಖಿಲ ರವಿ ರಾಜಾರಾಮ್ ಅವರು ಮಾತನಾಡಿ, ಕೊಡಗಿನಲ್ಲಿ ಇನ್ನು ಹೆಚ್ಚು ಉಚಿತ ಆಯುರ್ವೇದ ತಪಾಸಣಾ ಶಿಬಿರಗಳನ್ನು ಆಯೋಜಿಸಬೇಕು ಮತ್ತು ಆಯುರ್ವೇದದ ಬಗ್ಗೆ ಜನರಿಗೆ ಇನ್ನಷ್ಟು ಅರಿವು ಮೂಡಿಸಬೇಕೆಂದು ಹೇಳಿದರು. ಆಯುರ್ವೇದ ಅಕಾಡೆಮಿ ವೈದ್ಯ ಡಾ. ಪ್ರಶಾಂತ್ ಗೋಖಲೆ ಅವರು ಮಾತನಾಡಿ, ಜನತೆಗೆ ಆಯುರ್ವೇದದ ಮೇಲಿರುವ ಆಸಕ್ತಿಯನ್ನು ಕಂಡು ಇನ್ನು ಮುಂದಿನ ದಿನಗಳಲ್ಲಿ ಹಲವಾರು ಉಚಿತ ಶಿಬಿರಗಳನ್ನು ಆಯೋಜಿಸಲು ಅವರ ಮತ್ತು ಅವರ ತಂಡದ ಸಂಪೂರ್ಣ ಸಹಕಾರವಿರುತ್ತದೆ ಎಂದು ತಿಳಿಸಿದರು.
ಅನ್ವಯ ಆಯುರ್ವೇದದ ವೈದ್ಯರಾದ ಡಾ. ಅನುಷಾರವರು ಮಾತನಾಡಿ, ಇದು ನಮ್ಮ ಮೊದಲ ಪ್ರಯತ್ನ. ಇದೇ ರೀತಿ ಇನ್ನೂ ಹಲವಾರು ಸಮಸ್ಯೆಗಳಿಗೆ ಆಯುರ್ವೇದದ ಉಚಿತ ಶಿಬಿರಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸುತ್ತೇವೆ ಎಂದರು.