ಮಡಿಕೇರಿ, ಜು. ೧೬: ಪೊನ್ನಂ ಪೇಟೆ ಸಮೀಪದ ಹಳ್ಳಿಗಟ್ಟು ಶ್ರೀ ಮಾರಮ್ಮ ದೇವರ ವಾರ್ಷಿಕ ಉತ್ಸವ ಮಾರಿಗುಡಿ ನಮ್ಮೆ ಶೃದ್ಧಾಭಕ್ತಿ ಹಾಗೂ ವಿಜೃಂಭಣೆಯಿAದ ನಡೆಯಿತು.
ವರ್ಷಂಪ್ರತಿ ಕಕ್ಕಡ ಮಾಸದ ಒಂದು ದಿನದ ಮುಂಚಿತವಾಗಿ ತಾ. ೧೬ರಂದು ನಡೆಯುವ ಹಳ್ಳಿಗಟ್ಟು ಮಾರಮ್ಮ ದೇವರ ವಾರ್ಷಿಕ ಉತ್ಸವ ದಲ್ಲಿ ಮಚ್ಚಿಯಂಡ ಕುಟುಂಬದವರೇ ಪೂಜಾರಿಗಳಾಗಿ ವಿವಿಧ ವಿಧಿ ವಿಧಾನ ಗಳನ್ನು ಪೂರೈಸಿದರು. ಹಳ್ಳಿಗಟ್ಟು ಊರಿನಲ್ಲಿ ಪ್ರಮುಖ ವಾಗಿ ನಾಲ್ಕು ದೇವಸ್ಥಾನಗಳಿದ್ದು, ಇಲ್ಲಿನ ಭದ್ರಕಾಳಿ ದೇವಸ್ಥಾನದಲ್ಲಿ ಮಾತ್ರ ಬ್ರಾಹ್ಮಣರ ಪೂಜೆ ನೆರವೇರಿಸುತ್ತಿದ್ದು ಉಳಿದ ಮೂರು ದೇವಸ್ಥಾನಗಳಲ್ಲಿ ಕೊಡವ ಜನಾಂಗದವರೇ ಪೂಜಾರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಇಲ್ಲಿನ ಗುಂಡಿಯತ್ ಅಯ್ಯಪ್ಪ ದೇವಸ್ಥಾನ ಹಾಗೂ ಪೊಲವಪ್ಪ ದೇವಸ್ಥಾನದಲ್ಲಿ ಚಮ್ಮಟೀರ ಹಾಗೂ ಮೂಕಳೇರ ಕುಟುಂಬ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದರೆ, ಮಾರಮ್ಮ ದೇವ ಸ್ಥಾನದಲ್ಲಿ ಮಚ್ಚಿಯಂಡ ಕುಟುಂಬ ವಿವಿಧ ಕಟ್ಟುಪಾಡುಗಳೊಂದಿಗೆ ಪೂಜೆಯನ್ನು ನೆರವೇರಿಸುತ್ತಾರೆ.
ಭಾನುವಾರ ನಡೆದ ಮಾರಮ್ಮ ದೇವರ ಉತ್ಸವದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಆಗಮಿಸಿ ತಮ್ಮ ತಮ್ಮ ಹರಕೆಗಳನ್ನು ಅರ್ಪಿಸಿದರು. ತಾ. ೨೨ರಂದು ಹಬ್ಬ ಸಂಪನ್ನಗೊಳ್ಳಲಿದೆ.