ಸಿದ್ದಾಪುರ, ಜು. ೧೬: ನೆಲ್ಲಿಹುದಿಕೇರಿ ನಗರದ ಅಭಿವೃದ್ಧಿಯ ಹಿತ ದೃಷ್ಟಿಯಿಂದ ಹಾಗೂ ಪಾರ್ಕಿಂಗ್ ಸಮಸ್ಯೆ ಬಗೆಹರಿಸುವ ಸಲುವಾಗಿ ಶಾಸಕರ ಅನುದಾನದಲ್ಲಿ ಬರೋಬ್ಬರಿ ರೂ. ೨ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ ಅಗಲೀಕರಣ ಮತ್ತು ಚರಂಡಿ ಕಾಮಗಾರಿ ಪೂರ್ಣಗೊಂಡಿದ್ದು, ಸಮಸ್ಯೆ ಇತ್ಯರ್ಥವಾಗುವ ಬದಲು ಉಲ್ಬಣಗೊಂಡಿರುವುದು ಕಂಡುಬAದಿದ್ದು, ಇದೀಗ ಸಾರ್ವಜನಿಕರು ಶಾಸಕರು ಹಾಗೂ ಗುತ್ತಿಗೆದಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಅಗಲೀಕರಣ ಸಂಪೂರ್ಣ ಕಳಪೆ - ಸಾರ್ವಜನಿಕರ ಆರೋಪ

೨೦೨೧ ರಲ್ಲಿ ನೆಲ್ಲಿಹುದಿಕೇರಿ ನಗರದ ಸುಮಾರು ೫೦೦ ಮೀಟರ್ ದೂರ ರಸ್ತೆ ಅಗಲೀಕರಣದ ಹೆಸರಿನಲ್ಲಿ ರಸ್ತೆ ಮಧ್ಯದಿಂದ ೯ ಮೀಟರ್ ಅಳತೆಯ ಒಳಗಿರುವ ಅಂಗಡಿಗಳನ್ನು ತೆರವುಗೊಳಿಸಿ, ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ವಾಹನಗಳ ಓಡಾಟದಿಂದ ರಸ್ತೆಯ ಬದಿ ಕುಸಿದು ಕೆಲವೊಂದು ವಾಹನಗಳು ಸಿಲುಕಿದ ಪ್ರಸಂಗ ಕೂಡ ನಡೆದಿತ್ತು. ಕೋಟಿ ರೂಪಾಯಿ ಹಣ ಖರ್ಚು ಮಾಡಿ ಪೂರ್ಣಗೊಂಡ ರಸ್ತೆಯು ಕೆಲವೇ ದಿನಗಳಲ್ಲಿ ಕುಸಿದಿರುವಕ್ಕೆ ಕಾರಣ ಕಳಪೆ ಕಾಮಗಾರಿ ಎಂದು ಸಾರ್ವಜನಿಕರು ದೂರಿದ್ದಾರೆ.

ಅವೈಜ್ಞಾನಿಕ ಚರಂಡಿ ನಿರ್ಮಾಣ

ರಸ್ತೆ ಅಗಲೀಕರಣದೊಂದಿಗೆ ಚರಂಡಿ ನಿರ್ಮಾಣ ಕೂಡ ಮಾಡಲಾಗಿದೆ. ಆದರೆ ಚರಂಡಿ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಮಳೆ ನೀರು ಚರಂಡಿಗೆ ಹರಿಯದೇ ಮುಖ್ಯ ರಸ್ತೆಯ ಮೂಲಕ ಹರಿಯುತ್ತಿದೆ. ಅಲ್ಲದೆ ರಸ್ತೆಗೆ ಹೊಂದಿಕೊAಡಿರಬೇಕಾದ ಚರಂಡಿಯ ನಿರ್ಮಾಣ ರಸ್ತೆಯ ತಡೆಗೋಡೆಯಂತೆ ಕಂಡುಬರುತ್ತಿರುವ ಕಾರಣ ಮಳೆ ನೀರು ಚರಂಡಿಗೆ ಹರಿಯುವುದು ಸ್ಥಗಿತವಾಗಿದೆ.

ತ್ಯಾಜ್ಯದಿಂದ ಭರ್ತಿಯಾದ ಚರಂಡಿ

ಚರಂಡಿಯಲ್ಲಿ ಮಳೆ ನೀರು ಹರಿಯದ ಹಿನ್ನೆಲೆಯಲ್ಲಿ ಇದೀಗ ವ್ಯಾಪ್ತಿಯ ಕಸ, ತ್ಯಾಜ್ಯಗಳು ಚರಂಡಿಯಲ್ಲಿ ಶೇಖರಣೆಯಾಗುತ್ತಿದೆ. ಕಸ ತ್ಯಾಜ್ಯಗಳು ತುಂಬಿರುವ ಹಿನ್ನೆಲೆಯಲ್ಲಿ ಪಾದಚಾರಿಗಳು ಮೂತ್ರ ವಿಸರ್ಜನೆ ಮಾಡುವುದು ಹಾಗೂ ಸ್ಥಳೀಯ ಅಂಗಡಿಗಳ, ಮನೆಗಳ ನೀರು ನೇರವಾಗಿ ಚರಂಡಿಗೆ ಬಿಡುತ್ತಿರುವುದರಿಂದ ಚರಂಡಿಯಲ್ಲಿ ತ್ಯಾಜ್ಯ ನೀರು ಶೇಖರಣೆಯಾಗುತ್ತಿದ್ದು ಸೊಳ್ಳೆಗಳು ಉತ್ಪತ್ತಿಯಾಗುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಚರಂಡಿ ನೀರಿನಿಂದ ದುರ್ನಾತ ಹಬ್ಬಿದ್ದು ಸಮೀಪದ ಹೊಟೇಲು, ಅಂಗಡಿಗಳಿಗೆ ಗ್ರಾಹಕರು ತೆರಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನೂತನ ರಸ್ತೆಯಲ್ಲಿ ಬೇಕಿದೆ ವೇಗ ನಿಯಂತ್ರಕ

ನೂತನ ರಸ್ತೆಯು ಅಗಲವಾಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಗರಿಷ್ಠ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದು, ಇದೇ ಮಾರ್ಗದಲ್ಲಿ ನೂರಾರು ಸಂಖ್ಯೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಿರುವ ಹಿನ್ನೆಲೆ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಇತ್ತೀಚಿಗೆ ದ್ವಿಚಕ್ರ ವಾಹನ ಸವಾರನೋರ್ವನ ಶೋಕಿಗೆ ವೃದ್ಧರೋರ್ವರು ಹಾಸಿಗೆ ಹಿಡಿದಿರುವ ಘಟನೆಯು ನಡೆದಿದೆ. ರಸ್ತೆಯಲ್ಲಿ ಬ್ಯಾರಿಕೇಡ್ ಅಥವಾ ಹಂಪ್ ನಿರ್ಮಾಣ ಮಾಡುವ ಮೂಲಕ ವಾಹನಗಳ ವೇಗವನ್ನು ಕಡಿಮೆಗೊಳಿಸಬೇಕಾಗಿದೆ.

- ವಾಸು ಎ.ಎನ್.