ಚೆಯ್ಯಂಡಾಣೆ, ಜು. ೧೬: ನಾಪೋಕ್ಲುವಿನ ಮೊಹಿಯುದ್ದೀನ್ ಜುಮಾ ಮಸೀದಿಯ ಅಧೀನದಲ್ಲಿ ಸಮೀಪದ ಇಂದಿರಾ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಮಸೀದಿಯನ್ನು ಸಯ್ಯದ್ ಅಝೀಝ್ ತಂಗಳ್ ಎಮ್ಮೆಮಾಡು ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಕುಂಜಿಲ ಜುಮಾ ಮಸೀದಿಯ ಖತೀಬ ನಿಸಾರ್ ಅಹ್ಸನಿ ಕಕ್ಕಡಿಪುರಂ ಅವರು ಮಾತನಾಡಿ, ಮಸೀದಿಯು ಪ್ರಾರ್ಥನೆಗೆ ಸದ್ಬಳಕೆ ಆಗಬೇಕು ಎಂದರು.

ಕಾರ್ಯಕ್ರಮದ ಅಂಗವಾಗಿ ಬುರ್ದಾ ಮಜ್ಲೀಸ್, ನಾರಿಯತ್ ಸ್ವಲಾತ್ ವಿಶೇಷ ಪ್ರಾರ್ಥನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಾಪೋಕ್ಲುವಿನ ಯುಎಇ ಸಮಿತಿ ವತಿಯಿಂದ ಖರೀದಿಸಿದ ಸ್ಥಳದಲ್ಲಿ ಮಸೀದಿಯ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದ ಡಾ. ನಜೀಬ್ ಹಾಗೂ ಕೆ.ಎ. ಇಸ್ಮಾಯಿಲ್ ಮಸೀದಿಯ ಕೀಯನ್ನು ಮೊಹಿಯುದ್ದೀನ್ ಜುಮಾ ಮಸೀದಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಮಸೀದಿಯ ನಿರ್ಮಾಣ ಕಾರ್ಯದ ಮುಂದಾಳತ್ವ ವಹಿಸಿದ್ದ ಜಮಾಅತ್ ಸದಸ್ಯ ಆಸ್ಕರ್ ಸೆಟ್ ಅವರನ್ನು ಸನ್ಮಾನಿಸಿ, ಗೌರವಿಸ ಲಾಯಿತು. ಮೊಹಿಯುದ್ದೀ ಜುಮಾ ಮಸೀದಿಯ ಅಧ್ಯಕ್ಷ ಸಲೀಮ್ ಹ್ಯಾರಿಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊಹಿಯುದ್ದೀನ್ ಮಸೀದಿಯ ಮುದರ್ರಿಸ್ ಅಶ್ರಫ್ ಅಹ್ಸನಿ, ಹಳೇ ತಾಲೂಕು ಜಮಾಅತ್ ಅಧ್ಯಕ್ಷ ಮಹಮ್ಮದ್, ನಾಪೋಕ್ಲು ಜಮಾಅತ್ ಆಡಳಿತ ಮಂಡಳಿಯ ಪದಾಧಿಕಾರಿಗಳು, ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಜಮಾಅತ್‌ನ ಸದಸ್ಯರು, ಮತ್ತಿತರರು ಹಾಜರಿದ್ದರು.