ಮಡಿಕೇರಿ, ಜು. ೧೫: ಬೆಂಗಳೂರು ಆಯುರ್ವೇದ ಅಕಾಡೆಮಿ ಮತ್ತು ನೀಮಾ ಕೊಡಗು ಸಹಯೋಗದಲ್ಲಿ ಅನ್ವಯ ಆಯುರ್ವೇದ ಪಂಚ ಕರ್ಮ ಕೇಂದ್ರದಲ್ಲಿ ತಾ.೧೬ ರಂದು (ಇಂದು) ಉಚಿತ ಮಧುಮೇಹ ತಪಾಸಣಾ ಶಿಬಿರ ನಡೆಯಲಿದೆ ಎಂದು ಅನ್ವಯ ಆಯುರ್ವೇದಿಕ್ ಕ್ಲಿನಿಕ್ ಮತ್ತು ಪಂಚಕರ್ಮ ಕೇಂದ್ರದ ಡಾ.ಎಸ್. ಅನುಷಾ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅನ್ವಯ ಆಯುರ್ವೇದ ಕೇಂದ್ರದಲ್ಲಿ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆವರೆಗೆ ಶಿಬಿರ ನಡೆಯಲಿದ್ದು, ಮಧುಮೇಹ ತಪಾಸಣೆ, ಡಯಾಬಿಟಿಕ್ ಫುಟ್, ವಾಸಿಯಾಗದ ಗಾಯ, ಡಯಾಬಿಟಿಕ್ ರೆಟಿನೋಪತಿ, ಆಯುರ್ವೇದ ಆಹಾರ ಪದ್ಧತಿ ಮತ್ತು ವ್ಯಾಯಾಮ ಅಲ್ಲದೆ ಪಂಚಕರ್ಮ ಚಿಕಿತ್ಸೆಗಳ ಬಗ್ಗೆ ಉತ್ತಮ ಸೇವೆ ನೀಡಲು ನುರಿತ ಆಯುರ್ವೇದ ತಜ್ಞರ ತಂಡ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದರು.

ಭಾರತದ ವೈದ್ಯಪದ್ಧತಿಯಾದ ಆಯುರ್ವೇದವು ಪುರಾತನ ಕಾಲದಿಂದಲೂ ಮಧುಮೇಹವನ್ನು ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಿದೆ. ಉತ್ತಮ ಆಹಾರ ಪದ್ಧತಿ, ವಿಹಾರ, ಔಷಧಿಗಳ ಮುಖಾಂತರ ಹಲವಾರು ಜನರಲ್ಲಿ ಉತ್ತಮ ಬದಲಾವಣೆಗೆ ಕಾರಣವಾಗಿದೆ. ಇತರ ಚಿಕಿತ್ಸೆ ಪದ್ಧತಿಗಳಿಗಿಂತ ಅತ್ಯಂತ ವಿಭಿನ್ನವಾಗಿ ಪ್ರತಿ ವ್ಯಕ್ತಿಗೆ ಅವರ ದೈಹಿಕ ಪ್ರಕೃತಿ ಮತ್ತು ವ್ಯಾಧಿಯ ತೀವ್ರತೆಗೆ ಅನುಗುಣವಾಗಿ ಚಿಕಿತ್ಸೆ ನೀಡುತ್ತಾ ಬಂದಿದೆ. ಶಾರೀರಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಒಬ್ಬ ವ್ಯಕ್ತಿಗೆ ಬೇಕಾದ ಉತ್ತಮ ಚಿಕಿತ್ಸೆಯೂ ಲಭ್ಯವಿದೆ ಎಂದರು.

ಆಯುರ್ವೇದವು ಎಷ್ಟು ಪ್ರಭಾವವೋ ಅಷ್ಟೇ ಶಾಶ್ವತವೂ ಹೌದು. ಮುಂದಿನ ದಿನಗಳಲ್ಲಿಯೂ ಹಲವಾರು ಕಾಯಿಲೆಗಳಿಗೆ ಉಚಿತ ಆಯುರ್ವೇದ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಿದ್ದು, ಕೊಡಗಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗಪಡಿಸಿ ಕೊಳ್ಳುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪಂಚಕರ್ಮ ಕೇಂದ್ರದ ಸಹ ಸಂಸ್ಥಾಪಕ ಅನಿಲ್ ಉಪಸ್ಥಿತರಿದ್ದರು.