ಮಡಿಕೇರಿ, ಜು. ೧೫: ವೀರಾಜಪೇಟೆ ವಕೀಲ ಬಿ ರತ್ನಾಕರ ಶೆಟ್ಟಿ ಅವರನ್ನು ಭಾರತೀಯ ವಕೀಲ ಪರಿಷತ್ತು ವೃತ್ತಿಯಲ್ಲಿ ದುರ್ವರ್ತನೆ ತೋರಿದ ಕಾರಣದಿಂದ ಮೂರು ವರ್ಷಗಳ ಕಾಲ ಅಮಾನತ್ತು ಮಾಡಿದ್ದು, ೧ ಲಕ್ಷ ರೂ. ದಂಡವನ್ನು ಪುಕಾರುದಾರರಿಗೆ ನೀಡುವಂತೆಯೂ ತಪ್ಪಿದಲ್ಲಿ ಮತ್ತೆ ಒಂದು ವರ್ಷ ಕಾಲಾವಧಿ ವೃತ್ತಿಯಿಂದ ಅಮಾನತ್ತಿನಲ್ಲಿ ಇಡುವಂತೆಯೂ ಆದೇಶಿಸಿದೆ.
ವೀರಾಜಪೇಟೆ ಹೆಗ್ಗಳ ಗ್ರಾಮದ ಎನ್.ಎಸ್. ದೇವಯ್ಯ ಅವರು ನೀಡಿದ ದೂರಿನ ಅನ್ವಯ ವಿಚಾರಣೆ ನಡೆಸಿದ ಭಾರತೀಯ ವಕೀಲ ಪರಿಷತ್ ಅಧ್ಯಕ್ಷ ವೈ.ಆರ್. ಸದಾಶಿವರೆಡ್ಡಿ, ಸದಸ್ಯರುಗಳಾದ ಸುರೇಶ್ ಚಂದ್ರ ಮತ್ತು ಗಂಗಾಧರಯ್ಯ ಇವರುಗಳ ಸಮಿತಿ ಈ ತೀರ್ಮಾನವನ್ನು ಪ್ರಕಟಿಸಿದೆ.
ಪ್ರಕರಣದ ವಿವರ
ಪುಕಾರುದಾರ ಟಿ. ದೇವಯ್ಯ ಮತ್ತು ರತ್ನಾಕರ್ ಶೆಟ್ಟಿ ನೆರೆಕರೆಯ ನಿವಾಸಿಗಳಾಗಿದ್ದರು. ೨೦೦೫ರಲ್ಲಿ ದೇವಯ್ಯ ಅವರನ್ನು ಸಂಪರ್ಕಿಸಿದ ಶೆಟ್ಟಿ ಅವರು, ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದ ಮ್ಯಾಥ್ಯೂ ಮತ್ತು ಇತರರಿಗೆ ಜಾಮೀನು ನೀಡುವಂತೆ ದೇವಯ್ಯ ಅವರನ್ನು ಕೋರಿದ್ದರು. ಅದರಂತೆ ದೇವಯ್ಯ ಅವರು ಹೆಗ್ಗಳ ಗ್ರಾಮದ ತನ್ನ ೬೦ ಸೆಂಟ್ ಜಾಗವನ್ನು ಜಾಮೀನಿಗೆ ನೀಡಿದ್ದರು. ೨೦೦೭ರಲ್ಲಿ ದೇವಯ್ಯ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿತ್ತು. ಅವರ ಸತತ ಗೈರು ಹಾಜರಿಯಿಂದ ಜಾಮೀನು ನೀಡಿದ ಜಾಗವನ್ನು ಮುಟ್ಟುಗೋಲು ಹಾಕಿಕೊಂಡು ಕಂದಾಯ ಇಲಾಖೆಗೆ ವರ್ಗಾಯಿಸಿ ಆ ಹಣವನ್ನು ವಸೂಲಿ ಮಾಡುವಂತೆ ನ್ಯಾಯಾಲಯ ಸೂಚಿಸಿತ್ತು. ಕಂದಾಯ ಇಲಾಖೆ ರೂ. ೭೫,೦೦೦ ಪಾವತಿಸುವಂತೆ ಆದೇಶಿಸಿತ್ತು. ಇದರಿಂದ ಗಾಬರಿಗೊಂಡ ದೇವಯ್ಯ ಅವರು, ರತ್ನಾಕರ ಶೆಟ್ಟಿ ಅವರನ್ನು ಸಂಪರ್ಕಿಸಿ ಆ ಹಣವನ್ನು ಪಾವತಿಸುವಂತೆ ವಿನಂತಿಸಿದರು. ಆದರೆ, ಶೆಟ್ಟಿ ಅವರು ಕೇವಲ ರೂ. ೨ ಸಾವಿರ ಪಾವತಿಸಿ, ಮಡಿಕೇರಿಯ ವಕೀಲರೊಬ್ಬರಿಗೆ ಒಂದು ಪತ್ರವನ್ನು ನೀಡಿ ಅವರನ್ನು ಸಂಪರ್ಕಿಸುವAತೆ ಕೋರಿದರು. ಆ ಸಂದರ್ಭದಲ್ಲಿ ವಕೀಲ ರತ್ನಾಕರ್ ಶೆಟ್ಟಿ ಅವರು ಆರೋಪಿಗಳಾದ ಮ್ಯಾಥ್ಯೂ ಮತ್ತು ಇತರರು ಉದ್ದೇಶಪೂರ್ವಕ ವಾಗಿ ನ್ಯಾಯಾಲಯಕ್ಕೆ ಗೈರು ಹಾಜರಾಗುವಂತೆ ನೋಡಿಕೊಂಡಿದ್ದರು ಎಂಬುದನ್ನು ಮನವರಿಕೆ ಮಾಡಿ ಈ ಬಗ್ಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ದೂರು ನೀಡಿದ್ದÀರು.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ರತ್ನಾಕರ್ ಶೆಟ್ಟಿ ಅವರು ವೃತ್ತಿಯಲ್ಲಿ ದುರ್ನಡತೆ ತೋರಿದ್ದಾರೆ ಎಂಬ ಆರೋಪದ ಮೇಲೆ ಮೂರು ವರ್ಷಗಳವರೆಗೆ ಅಮಾನತುಗೊಳಿಸಿ, ಒಂದು ಲಕ್ಷ ರೂಪಾಯಿಯನ್ನು ದೂರುದಾರ ದೇವಯ್ಯ ಅವರಿಗೆ ನೀಡುವಂತೆಯೂ ತಪ್ಪಿದಲ್ಲಿ ಮತ್ತೆ ಒಂದು ವರ್ಷಗಳ ಕಾಲ ಅಮಾನತ್ತನ್ನು ಮುಂದುವರಿಸಿ ಆದೇಶ ನೀಡಿದೆ.