ಮಡಿಕೇರಿ, ಜು. ೧೪: ಇತ್ತೀಚೆಗೆ ಮಡಿಕೇರಿ ನಗರಸಭಾ ಸದಸ್ಯ ಹಾಗೂ ಮಡಿಕೇರಿ ಕೊಡವ ಸಮಾಜದ ನಿರ್ದೇಶಕರಾಗಿರುವ ಕಾಳಚಂಡ ಅಪ್ಪಣ್ಣ ಅವರ ಮೇಲೆ ಯುವಕರ ಗುಂಪು ಹಾಡಹಗಲೇ ಹಲ್ಲೆ ಮಾಡಿದ ಘಟನೆಯನ್ನು ಖಂಡಿಸಿ ಮಡಿಕೇರಿ ಕೊಡವ ಸಮಾಜದ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಕೊಡವ ಸಮಾಜ, ಗೌಡ ಸಮಾಜ, ಚೇಂಬರ್ ಆಫ್ ಕಾಮರ್ಸ್ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಸಲಾಯಿತು.

ಮಡಿಕೇರಿ ಕೊಡವ ಸಮಾಜದಿಂದ ತೆರಳಿದ ಪ್ರತಿಭಟನಾಕಾರರು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಹಲ್ಲೆಕೋರರ ವಿರುದ್ಧ ಘೋಷಣೆ ಕೂಗಿದರು. ಕಠಿಣ ಶಿಕ್ಷೆಯೊಂದಿಗೆ ಗಡಿಪಾರಿಗೆ ಒತ್ತಾಯಿಸಿದರು. ನಂತರ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ; ಜನಪ್ರತಿನಿಧಿಯೋರ್ವರ ಮೇಲೆ ಹಲ್ಲೆ ಮಾಡಿರುವದು ಖಂಡನೀಯ, ಇಂತಹ ಕುಕೃತ್ಯದ ವಿರುದ್ಧ ಇಂದು ಎಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕಿಳಿದಿದ್ದೇವೆ. ಐಟಿಐ ಜಂಕ್ಷನ್‌ನಲ್ಲಿ ಅಕ್ರಮ ಕಟ್ಟಡದ ವಿಚಾರಕ್ಕೆ ಸಂಬAಧಿಸಿದAತೆ ಯುವಕರ ತಂಡ ಹಲ್ಲೆ ಮಾಡಿದೆ. ಈ ಯುವಕರು ಮಾದಕ ವ್ಯಸನಿಗಳಾಗಿರುವುದು ತಿಳಿದು ಬಂದಿದೆ. ಇಂತಹವರನ್ನು ಕೇವಲ ಬಂದನಕ್ಕೊಳಪಡಿಸಿ ಬಿಡುಗಡೆ ಮಾಡುವದಕ್ಕಿಂತ ಕಠಿಣ ಕ್ರಮ ಕೈಗೊಂಡು ಗಡಿಪಾರು ಮಾಡಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.

ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ; ಜಿಲ್ಲೆಯಲ್ಲಿ ಎಲ್ಲ ಜನಾಂಗದವರು ಶಾಂತಿ ಸುವ್ಯವಸ್ಥೆಗೆ ಭಂಗ ತಾರದಂತೆ ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದೇವೆ. ಅಂತಹದರಲ್ಲಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುವಂತಹ ಘÀಟನೆಗಳು ನಡೆದರೆ ಸಹಿಸಲಾಗುವದಿಲ್ಲ. ಇಲ್ಲಿನ ಮೂಲನಿವಾಸಿಗಳ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕುವವರನ್ನು ಇಲ್ಲಿಂದ ಗಡಿಪಾರು ಮಾಡಬೇಕು. ನಾವು ಯಾರನ್ನೂ ವಿರೋಧ ಮಾಡುವದಿಲ್ಲ. ಐಟಿಐ ಜಂಕ್ಷನ್ ಬಳಿ ಅತಿಕ್ರಮಣ ಮಾಡಿಕೊಂಡು ಕಟ್ಟಡ ನಿರ್ಮಿಸಿರುವದನ್ನು ನಗರಸಭೆ, ಜಿಲ್ಲಾಡಳಿತ ಪರಿಶೀಲಿಸಿ ತೆರವುಗೊಳಿಸಬೇಕೆಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಮಾತನಾಡಿ; ಕೆಲವು ಮಾದಕ ವ್ಯಸನಿಗಳಿಂದಾಗಿ ಆಗಾಗ್ಗೆ ಅಹಿತಕರ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದನ್ನು ಮೊದಲು ಮಟ್ಟ ಹಾಕಬೇಕು. ಪೊಲೀಸ್ ಇಲಾಖೆ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಮಾದಕ ವಸ್ತುಗಳ ಮಾರಾಟ ದಂಧೆಯನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿದರು. ಮಹಿಳೆಯರ ಪರವಾಗಿ ಮಾತನಾಡಿದ ಹಿರಿಯ ಸಾಹಿತಿ ಮೊಣ್ಣಂಡ ಶೋಬಾ ಸುಬ್ಬಯ್ಯ; ಫೀ.ಮಾ.ಕಾರ್ಯಪ್ಪ, ಜ.ತಿಮ್ಮಯ್ಯ ಅವರುಗಳು ಜನಿಸಿದ ನಾಡಿನ ಕೊಡವರು ವೀರ-ಶೂರರಾಗಿದ್ದಾರೆ. ಇದು ನಮ್ಮ ಜನ್ಮ ಭೂಮಿಯಾಗಿದ್ದು, ಹೊರಗಿನವರು ದಬ್ಬಾಳಿಕೆ ನಡೆಸುವಂತಾಗಿದೆ. ಅಂತಹವರನ್ನು ಜಿಲ್ಲೆಯಿಂದ ಓಡಿಸಬೇಕೆಂದು ಒತ್ತಾಯಿಸಿದರು.

ಗೌಡ ಸಮಾಜದ ಪರವಾಗಿ ಪೊನ್ನಚನ ಮಧು ಸೋಮಣ್ಣ, ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಪರವಾಗಿ ಅಧ್ಯಕ್ಷ ಎಂ.ಧನAಜಯ, ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಅಲ್ಲಾರಂಡ ರಂಗಚಾವಡಿಯ ಅಲ್ಲಾರಂಡ ವಿಠಲ್ ನಂಜಪ್ಪ ಇನ್ನಿತರರು ಮಾತನಾಡಿ ಘಟನೆಯನ್ನು ಖಂಡಿಸಿದರು.

ನAತರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಇಲಾಖೆಯ ವತಿಯಿಂದ ಘಟನೆಗೆ ಕಾರಣಕರ್ತರ ವಿರುದ್ಧ ರೌಡಿಶೀಟರ್ ಮೊಕದ್ದಮೆ ದಾಖಲಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನಗರಸಭೆಗೆ ತೆರಳಿದ ಪ್ರತಿಭಟನಾಕಾರರು ನಗರಸಭಾ ಸದಸ್ಯನಿಗೆ ಹಲ್ಲೆ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಾಗದ ವಿಷಯದಲ್ಲಿನ ಊಹಾಪೋಹವನ್ನು ಪರಿಶೀಲಿಸಿ ಕಾನೂನು ವಿರುದ್ಧವಾಗಿ ಜಾಗವನ್ನು ಆಕ್ರಮಿಸಿಕೊಂಡಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಸದಸ್ಯೆ ಮುಕ್ಕಾಟಿರ ಸಬಿತಾ, ಮಡಿಕೇರಿ ಕೊಡವ ಸಮಾಜದ ಕಾರ್ಯದರ್ಶಿ ಕನ್ನಂಡ ಸಂಪತ್, ನಿರ್ದೇಶಕರುಗಳು, ಸದಸ್ಯರುಗಳು, ಜಿಲ್ಲೆಯ ವಿವಿಧ ಕೊಡವ ಸಮಾಜಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಂಘ-ಸAಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು. ನಗರ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.