ಸೋಮವಾರಪೇಟೆ, ಜು. ೧೪: ತಾಲೂಕಿನ ಹರಗ ಗ್ರಾಮದಲ್ಲಿ ಬಿ.ಎಸ್.ಎನ್.ಎಲ್. ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಹೆಚ್ಚಾಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಸುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಗ್ರಾಮ ಸೇರಿದಂತೆ ಸುತ್ತಲಿನ ೨೦ ರಿಂದ ೨೫ ಗ್ರಾಮಗಳ ಸಾರ್ವಜನಿಕರು ಇಲ್ಲಿನ ಬಿ.ಎಸ್.ಎನ್.ಎಲ್. ನೆಟ್‌ವರ್ಕ್ ಬಳಸುತ್ತಿದ್ದಾರೆ. ವಿದ್ಯುತ್ ಇದ್ದಾಗ ಯಾವುದೇ ಸಮಸ್ಯೆ ಇರುವುದಿಲ್ಲ. ವಿದ್ಯುತ್ ಕೈಕೊಟ್ಟಾಗ ನೆಟ್‌ವರ್ಕ್ ಸ್ಥಗಿತಗೊಳ್ಳುತ್ತದೆ. ಇಲ್ಲಿರುವ ಜನರೇಟರ್‌ಗೆ ಡೀಸೆಲ್ ಇಲ್ಲದೆ, ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೆ, ಇರುವ ಬ್ಯಾಟರಿ ಕೆಲಸ ಮಾಡುತ್ತಿಲ್ಲ. ಬಿ.ಎಸ್.ಎನ್.ಎಲ್. ಬಿಟ್ಟು ಬೇರಾವುದೇ ನೆಟ್‌ವರ್ಕ್ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಮಳೆಗಾಲದಲ್ಲಿ ಈ ಭಾಗದಲ್ಲಿ ಭಾರಿ ಮಳೆ ಸುರಿಯುತ್ತದೆ. ಜೋರು ಗಾಳಿ-ಮಳೆ ಪ್ರಾರಂಭವಾದರೆ ವಿದ್ಯುತ್ ಇರುವುದಿಲ್ಲ. ಇಲ್ಲಿನ ಜನರಿಗೆ ಯಾವುದಾದರೂ ಅನಾಹುತಗಳು ನಡೆದಲ್ಲಿ ವಿಷಯ ತಿಳಿಸಲು ಅಕ್ಕಪಕ್ಕದ ಬೆಟ್ಟ-ಗುಡ್ಡಗಳನ್ನು ಹತ್ತಬೇಕಿದೆ. ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರೆ, ಯಾವುದೇ ಪ್ರಯೋಜನವಾಗುತ್ತಿಲ್ಲ. ಸಂಸದ ಪ್ರತಾಪ್ ಸಿಂಹ ಅವರು ಇಲ್ಲಿನ ಕೇಂದ್ರಕ್ಕೆ ನಿರಂತರವಾಗಿ ಡೀಸೆಲ್ ಸರಬರಾಜು ಮಾಡಲು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕೆಂದು ಸ್ಥಳೀಯ ನಿವಾಸಿ ಶರಣ್ ಗೌಡ ಸೇರಿದಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.