ಮಡಿಕೇರಿ, ಜು. ೧೪: ಇಂದಿನ ಜಾಗತೀಕರಣದ ಅಬ್ಬರದ ದಿನಗಳಲ್ಲಿ ಎಲ್ಲೆಲ್ಲೂ ಕಾಂಕ್ರೀಟ್ ಕಾಡುಗಳೇ ಕಂಡು ಬರುತ್ತಿರುವಾಗ ವನ ಸಂಪತ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಸಿಗಳ ನೆಡುವಿಕೆ ಹೆಚ್ಚಾಗಬೇಕಿದೆ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಲ್ಲಿನ ಮಿಸ್ಟಿ ಹಿಲ್ಸ್ ನಿರ್ವಹಣೆಯ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ವನ ಮಹೋತ್ಸವವನ್ನು ಸಸಿ ನೆಡುವ ಮೂಲಕ ಸುಂದರರಾಜ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಸುಂದರರಾಜ್, ನಗರ ಪ್ರದೇಶಗಳು ಮಾತ್ರವಲ್ಲ ಗ್ರಾಮೀಣ ಪ್ರದೇಶ ಗಳಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಕಾಂಕ್ರೀಟಿಕರಣವಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಹೀಗಾಗಿ ವನ ಸಂಪತ್ತನ್ನು ಸಂರಕ್ಷಿಸಬೇಕಾದ ಅಗತ್ಯತೆ ಮನಗಂಡು ಸಸ್ಯ ಸಂಕುಲ ವೃದ್ಧಿಸುವ ದೃಷ್ಟಿಯಲ್ಲಿ ವನಮಹೋತ್ಸವದಂಥ ಕಾರ್ಯಕ್ರಮಗಳು ಹೆಚ್ಚಾಗಬೇಕಾಗಿದೆ ಎಂದರು.
ರೋಟರಿ ಜಿಲ್ಲೆ ೩೧೮೧ನ ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷ ಸತೀಶ್ ಬೊಳಾರ್ ಮಾತನಾಡಿ, ರೋಟರಿಯು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಈ ವರ್ಷವೂ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಸಸ್ಯರಾಶಿಯನ್ನು ಹೆಚ್ಚಿಸುವ ಯೋಜನೆ ಜತೆಗೇ ಮಳೆಕೊಯ್ಲು ಯೋಜನೆ ಯನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿದರು.
ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ನಗರಸಭೆ ವತಿಯಿಂದ ಕಳೆದ ವರ್ಷ ೧ ಸಾವಿರ ಸಸಿಗಳನ್ನು ನಗರ ವ್ಯಾಪ್ತಿ ಯಲ್ಲಿ ನೆಡಲಾಗಿತ್ತು.
ಈ ವರ್ಷವೂ ಸಸಿಗಳನ್ನು ನೆಡುವ ಮೂಲಕ ಮಡಿಕೇರಿ ನಗರವನ್ನು ಹಸಿರೀಕರಣ ಮಾಡುವ ಯೋಜನೆಯಿದೆ. ನಗರದ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೋರ್ವರ ಕರ್ತವ್ಯ ಎಂದರು.
ರೋಟರಿ ಸಹಾಯಕ ಗವರ್ನರ್ ದೇವಣಿರ ತಿಲಕ್ ಮಾತನಾಡಿ, ಅಂಗನವಾಡಿಗಳಿಗೆ ಮೂಲಸೌಲಭ್ಯ ಕಲ್ಪಿಸುವುದು, ಮಳೆಕೊಯ್ಲು ಯೋಜನೆ, ಆರೋಗ್ಯ ಸಂರಕ್ಷಣೆ ಯಂತಹ ರೋಟರಿಯ ಮಹತ್ವದ ಜಿಲ್ಲಾ ಯೋಜನೆಗಳ ಜತೆಯಲ್ಲಿಯೇ ಪರಿಸರ ರಕ್ಷಣೆಯ ಯೋಜನೆಗಳಿಗೆ ಕೂಡ ಈ ಸಾಲಿನಲ್ಲಿ ರೋಟರಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮಾತನಾಡಿ,, ಈ ಸಾಲಿನ ಮೊದಲ ಯೋಜನೆಯಾಗಿ ವನಮಹೋತ್ಸವ ಆಯೋಜಿಸಲಾಗಿದೆ, ರೋಟರಿ ಮಿಸ್ಟಿ ಹಿಲ್ಸ್ ನಿರ್ವಹಣೆಯ ನಗರಸಭೆಯ ಉದ್ಯಾನವನದ ಪ್ರಯೋಜನವನ್ನು ನೂರಾರು ಮಕ್ಕಳು ಪಡೆದುಕೊಳ್ಳುತ್ತಿದ್ದು ಈ ವನದಲ್ಲಿ ಹಸಿರು ರಾಶಿ ನಳನಳಿಸುತ್ತಿರಬೇಕೆಂಬ ಉದ್ದೇಶದಿಂದ ಅನೇಕ ಸಸಿಗಳನ್ನು ನೆಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ರತ್ನಾಕರ್ ರೈ ವಂದಿಸಿದ ಕಾರ್ಯಕ್ರಮವನ್ನು ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್ ಎಚ್.ಟಿ. ನಿರೂಪಿಸಿದರು. ನಗರಸಭೆಯ ಸದಸ್ಯೆ ಶಾರದಾ ನಾಗರಾಜ್, ಮಾಜಿ ಸದಸ್ಯೆ ವೀಣಾಕ್ಷಿ, ಮಿಸ್ಟಿ ಹಿಲ್ಸ್ ಪ್ರಮುಖರಾದ ಅನಂತಶಯನ, ಪ್ರಸಾದ್ ಗೌಡ, ರವೀಂದ್ರ ರೈ, ಅಂಬೆಕಲ್ ಜೀವನ್, ಎ.ಕೆ. ವಿನೋದ್, ಪಿ.ಆರ್. ರಾಜೇಶ್, ಪೂವಯ್ಯ, ಪಿ.ವಿ. ಅಶೋಕ್, ಶಂಕರ್ ಪೂಜಾರಿ, ಮಡಿಕೇರಿ ರೋಟರಿ ವುಡ್ಸ್ ಅಧ್ಯಕ್ಷ ವಸಂತ್ ಕುಮಾರ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.