ಕುಶಾಲನಗರ, ಜು. ೧೪: ಅಂತರರಾಜ್ಯ ಮಾದಕ ವಸ್ತು ಮಾರಾಟಗಾರರ ಜಾಲವನ್ನು ಪತ್ತೆ ಹಚ್ಚಿ ಹೊರರಾಜ್ಯದ ಡ್ರಗ್ ಪೆಡ್ಲರ್ ಸೇರಿದಂತೆ ಒಟ್ಟು ೧೭ ಮಂದಿಯನ್ನು ಬಂಧಿಸುವಲ್ಲಿ ಕುಶಾಲನಗರ ವೃತ್ತದ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಕುಶಾಲನಗರ ಡಿವೈಎಸ್‌ಪಿ ಕಚೇರಿಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಪ್ರಕರಣಕ್ಕೆ ಸಂಬAಧಿಸಿದ ಪ್ರಮುಖ ಆರೋಪಿ ಒರಿಸ್ಸಾ ಮೂಲದ ಸೂರ್ಯಕಾಂತ್, ಕೊಪ್ಪ ಸಮೀಪದ ಹೊನ್ನಾಪುರ ಗ್ರಾಮದ ನಾಗಭೂಷಣ್, ಅಭಿಲಾಷ್ ಅವರುಗಳನ್ನು ಬಂಧಿಸಲಾಗಿದೆ.

ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸುಂಟಿಕೊಪ್ಪ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ವಿಶೇಷ ಕಾರ್ಯಾಚರಣೆ ತಂಡ ಮೂಲಕ ಏಕಕಾಲದಲ್ಲಿ ದಾಳಿ ಮಾಡಿ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ೫ ಆರೋಪಿಗಳು ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ೭ ಮಂದಿ, ಸುಂಟಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ೫ ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ ಎಂದು ತಿಳಿಸಿದರು.

ಕುಶಾಲನಗರ ಪಟ್ಟಣ ಗ್ರಾಮಾಂತರ ಹಾಗೂ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರು ಗಾಂಜಾ ಮತ್ತು ಮಾದಕ ವಸ್ತು ಸೇವನೆ ವ್ಯಸನಿಗಳಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಕೆ.ಎಸ್. ಸುಂದರರಾಜ್, ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಆರ್.ವಿ. ಗಂಗಾಧರಪ್ಪ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತದ ಪೊಲೀಸ್ ನಿರೀಕ್ಷಕರಾದ ಬಿ ಜಿ ಮಹೇಶ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚನೆ ಮಾಡಿ ಯಶಸ್ವಿ ಕಾರ್ಯಾಚರಣೆ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ತಿಳಿಸಿದ್ದಾರೆ.

ಪ್ರಮುಖ ಆರೋಪಿ ಒರಿಸ್ಸಾ ಮೂಲದ ಸೂರ್ಯಕಾಂತ್ ಕೊಪ್ಪ ಬೈಲುಕೊಪ್ಪ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ, ಆಟೋ ಚಾಲಕ ವೃತ್ತಿಯಲ್ಲಿದ್ದ ಈತ ಒರಿಸ್ಸಾದಿಂದ ಮತ್ತು ದೇಶದ ವಿವಿಧ ಭಾಗಗಳಿಂದ ರೈಲು, ಬಸ್ ಮೂಲಕ ಮಾದಕ ವಸ್ತುಗಳನ್ನು ತರಿಸಿಕೊಂಡು ಮೈಸೂರು ಕೊಡಗು ಭಾಗದ ಆಯಕಟ್ಟಿನ ಪ್ರದೇಶಗಳಿಗೆ ಸಾಗಾಟ ಮಾಡುತ್ತಿದ್ದ ವ್ಯವಸ್ಥೆ ಇತ್ತು. ಇದರೊಂದಿಗೆ ನೆರೆಯ ಕೇರಳ ರಾಜ್ಯಕ್ಕೂ ಸರಬರಾಜು ಮಾಡುವ ಬಗ್ಗೆ ಮಾಹಿತಿಗಳು ಹೊರ ಬಿದ್ದಿವೆ. ಪೂರ್ವ ಬಂಧಿತ ಆರೋಪಿ ಕೇರಳಕ್ಕೆ ಸೇರಿದವನಾಗಿದ್ದಾನೆ. ತನಿಖೆ ನಡೆಯುತ್ತಿದೆ ಎಂದು ರಾಮರಾಜನ್ ತಿಳಿಸಿದ್ದಾರೆ.

ಗಾಂಜಾ ಮತ್ತು ಮಾದಕ ವಸ್ತು ಖರೀದಿಸಿರುವ ಮತ್ತು ಬಳಕೆ ಮಾಡಿರುವ ಆರೋಪಿಗಳ

(ಮೊದಲ ಪುಟದಿಂದ) ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಆರೋಪಿಗಳಿಂದ ಮೊಬೈಲ್, ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಶಾಲಾ ಕಾಲೇಜು ಮಕ್ಕಳ ಪೋಷಕರು ಎಚ್ಚರಿಕೆ ವಹಿಸಬೇಕಾಗಿದೆ. ಮಕ್ಕಳು ಯಾವುದೇ ಸಂದರ್ಭ ಮಾದಕ ವಸ್ತುಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವುದು ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿಎಸ್‌ಐ ಮೋಹನ್‌ರಾಜು, ಶ್ರೀಧರ್, ರವೀಂದ್ರ ಎಎಸ್‌ಐಗಳಾದ ವೆಂಕಟೇಶ, ಸಿಬ್ಬಂದಿಗಳಾದ ಸತೀಶ್, ದಿನೇಶ್ ಕುಮಾರ್, ಪ್ರಕಾಶ್, ಸಂದೀಪ್ ರೈ, ಪ್ರಿಯ ಕುಮಾರ್, ದಿನೇಶ್, ರಂಜಿತ್, ಸಂಪತ್ ಪಾಲ್ಗೊಂಡಿದ್ದರು. ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ತಿಳಿಸಿದ್ದಾರೆ. ಪ್ರಕರಣವನ್ನು ಪತ್ತೆಹಚ್ಚಿದ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಗದು ಬಹುಮಾನ ಘೋಷಿಸಿದ್ದಾರೆ.

- ಚಂದ್ರಮೋಹನ್