ಸುಂಟಿಕೊಪ್ಪ, ಜು. ೧೪: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ನಡೆದಿದೆ.

ಸಮೀಪದ ಅತ್ತೂರು ನಲ್ಲೂರು ಗ್ರಾಮದ ಕಂಬಿಬಾಣೆಯ ವೃಂದಾವನ ತೋಟದ ಬಳಿ ಸಂಜೆ ೬ ಗಂಟೆ ಸುಮಾರಿಗೆ ಕೆಲಸ ಮುಗಿಸಿ ಬರುತ್ತಿದ್ದ ಭೂತನಕಾಡು ನಿವಾಸಿ ರಾಮಸ್ವಾಮಿ ಮೇಲೆ ಕಾಡಾನೆಯೊಂದು ದಿಢೀರ್ ದಾಳಿ ನಡೆಸಿದೆ. ಆನೆಯ ದಾಳಿಯಿಂದ ಬಲಗಾಲಿಗೆ ಗಂಭೀರ ಗಾಯವಾಗಿದ್ದು, ಎಡ ಕಾಲು, ಎದೆಯ ಭಾಗದಲ್ಲಿ ಗಾಯಗಳಾಗಿವೆ.

ಕಾರ್ಮಿಕ ರಾಮಸ್ವಾಮಿಯ ಬೊಬ್ಬೆಗೆ ಹೆದರಿದ ಆನೆಯು ಅಲ್ಲಿಂದ ಕಾಲ್ಕಿತ್ತಿದೆ. ವಿಷಯವರಿತ ಸ್ಥಳೀಯರು ಗಾಯಗೊಂಡಿದ್ದ ಕಾರ್ಮಿಕನನ್ನು ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.

ಹಾಗೆಯೇ ಕಂಬಿಬಾಣೆಯ ಚಿಕ್ಲಿಹೊಳೆಯ ರಸ್ತೆಗೆ ತೆರಳುವ ಕಾಫಿ ಬೆಳೆಗಾರ ಎಂ.ಕೆ. ನರೇಂದ್ರ ಅವರ ಮನೆಯ ಗೇಟನ್ನು ಕಾಡಾನೆ ತುಳಿದು ಹಾನಿಗೊಳಿಸಿ ಪರಾರಿಯಾಗಿದೆ.

ಕಂಬಿಬಾಣೆ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟು ಆತಂಕ ಸೃಷ್ಟಿ ಮಾಡುತ್ತಿವೆ.