*ಗೋಣಿಕೊಪ್ಪ, ಜು. ೧೩: ಕಳೆದ ಐದು ವರ್ಷಗಳ ಹಿಂದೆ ಪೋಷಣ್ ಟ್ರಾö್ಯಕರ್ ಅಳವಡಿಸಲು ಸರಕಾರ ನೀಡಿದ್ದ ಮೊಬೈಲ್ಗಳು ನಿರ್ಜೀವ ಸ್ಥಿತಿಯಲ್ಲಿದ್ದು, ಕಾರ್ಯಕ್ರಮ ಅನುಷ್ಠಾನಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಕಾರಣವೊಡ್ಡಿ ಸಅಂಗನವಾಡಿ ಕಾರ್ಯಕರ್ತರು ಮೊಬೈಲ್ಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಹಿಂದಿರುಗಿಸಿ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಪೊನ್ನಂಪೇಟೆ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಸುಮಿತ್ರ ನೇತೃತ್ವದಲ್ಲಿ ಪೊನ್ನಂಪೇಟೆ ತಾಲೂಕು ಯೋಜನಾಧಿಕಾರಿ ಕಚೇರಿಯ ಮುಂದೆ ಕಾರ್ಯಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂಬ ಆಗ್ರಹದೊಂದಿಗೆ ನಿಷ್ಪçಯೋಜಕ ಮೊಬೈಲ್ಗಳನ್ನು ಯೋಜನಾಧಿಕಾರಿಗೆ ಹಿಂದಿರುಗಿಸಿದರು.
ಸರಕಾರ ನೀಡಿರುವ ಮೊಬೈಲ್ನಲ್ಲಿ ಆಗಿಂದಾಗ್ಗೆ ತಾಂತ್ರಿಕ ದೋಷಗಳು ಉಂಟಾಗುತ್ತಿದೆ. ನಮಗೆ ನೀಡಿರುವ ಬಿಎಸ್ಎನ್ಎಲ್ ಸಿಮ್ಗಳಿಗೆ ಕರೆನ್ಸಿ ಹಾಕದೆ ಆರರಿಂದ ಎಂಟು ತಿಂಗಳು ಕಳೆದಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ತಮ್ಮ ಸ್ವಂತ ಮೊಬೈಲ್ಗಳಿಗೆ ಕರೆನ್ಸಿ ಹಾಕಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಕೆಲವು ಮೊಬೈಲ್ಗಳು ರಿಪೇರಿಗೆ ಬಂದಿದ್ದು, ನಮ್ಮ ಹಣದಿಂದಲೇ ರಿಪೇರಿ ಮಾಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್ಗಳನ್ನು ಹಿಂದಿರುಗಿಸುತ್ತಿದ್ದೇವೆ ಎಂದು ಸುಮಿತ್ರ ತಿಳಿಸಿದರು. ತಾಲೂಕು ಉಪಾಧ್ಯಕ್ಷೆ ನಿರ್ಮಲ, ಕಾರ್ಯದರ್ಶಿ ನಳಿನಾಕ್ಷಿ, ಖಜಾಂಜಿ ರಾಜೇಶ್ವರಿ ಹಾಗೂ ಪದಾಧಿಕಾರಿಗಳು ಸದಸ್ಯರುಗಳು ಹಾಜರಿದ್ದರು.