ಕುಶಾಲನಗರ, ಜು. ೧೩: ಮುಂಗಾರು ಮಳೆ ಬೆನ್ನಲ್ಲೇ ಕುಶಾಲನಗರ ತಾಲೂಕಿನ ಹಲವು ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. ರೈತಾಪಿ ವರ್ಗ ಬೆಳಗ್ಗಿನಿಂದ ಸಂಜೆ ತನಕ ತಮ್ಮ ಹೊಲಗಳಲ್ಲಿ ಬಿತ್ತನೆ ಮತ್ತಿತರ ಕಾರ್ಯಗಳಲ್ಲಿ ತೊಡಗಿರುವ ದೃಶ್ಯ ಗೋಚರಿಸಿದೆ.
ಕುಶಾಲನಗರದ ಸಮೀಪದ ಹೆಬ್ಬಾಲೆ, ಶಿರಂಗಾಲ, ಸಿದ್ದಲಿಂಗ ಪುರ, ಹಾರಂಗಿ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಮುಸುಕಿನ ಜೋಳ, ಭತ್ತದ ಕೃಷಿಯಲ್ಲಿ ರೈತರು ಸನ್ನದ್ಧರಾಗಿದ್ದಾರೆ. ಕುಶಾಲನಗರ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮುಸುಕಿನ ಜೋಳ ಬಿತ್ತನೆ ಕಾರ್ಯ ಈಗಾಗಲೇ ಮುಗಿದಿದ್ದು ಭತ್ತದ ನಾಟಿ ಕಾರ್ಯ ಸಿದ್ಧತೆ ಆರಂಭ ಗೊಂಡಿರುವುದು ಕಾಣಬಹುದು.
ರೈತಾಪಿ ವರ್ಗ ತಮ್ಮ ಹೊಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮುಸುಕಿನ ಜೋಳ ಬಿತ್ತನೆ ಕಾರ್ಯ ನಡೆಸಿದ್ದು ಕಳೆದ ಎರಡು ವಾರಗಳಿಂದ ಬಿದ್ದ ಮಳೆಯ ನಂತರ ಕಳೆ ಕೀಳುವುದರ ಜೊತೆಗೆ ಗೊಬ್ಬರ ನೀಡುವುದರಲ್ಲಿ ತಲ್ಲೀನರಾಗಿದ್ದಾರೆ. ಇದರೊಂದಿಗೆ ಮಳೆ ಆಶ್ರಿತ ಮತ್ತು ಹಾರಂಗಿ ನೀರಿನ ಅವಲಂಬಿತ ಪ್ರದೇಶಗಳಲ್ಲಿ ಭತ್ತದ ಬಿತ್ತನೆಗೆ ಸಸಿಮುಡಿ ತಯಾರಿ ಸಾಗುತ್ತಿದೆ.
ಮುಸುಕಿನ ಜೋಳಕ್ಕೆ ಕಳೆದ ಬಾರಿ ದರ ಅತಿ ಕಡಿಮೆಯಾಗಿದ್ದು, ಈ ಬಾರಿ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹೆಬ್ಬಾಲೆಯ ರೈತ ಸೋಮಣ್ಣ. ವಾಣಿಜ್ಯ ಬೆಳೆ ಶುಂಠಿಗೆ ಮಾತ್ರ ಈ ಬಾರಿ ಬಂಪರ್ ಬೆಲೆ ದೊರಕುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಬೆಳೆಗಳ ನಡುವೆ ಕೆಸ, ಗೆಣಸು ಮತ್ತಿತರ ಬೆಳೆಗಳನ್ನು ಬೆಳೆಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಈ ಬಾರಿ ೧೫೦೦ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಲಾಗಿದೆ. ಈಗಾಗಲೇ ೧೯೦೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮುಗಿದಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಾದವ ಬಾಬು ಮಾಹಿತಿ ನೀಡಿದ್ದಾರೆ.
ತಾಲೂಕಿನಾದ್ಯಂತ ಸುಮಾರು ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು, ರೈತಾಪಿ ವರ್ಗ ಈಗಾಗಲೇ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದು ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಕೆಲವೊಂದು ಪ್ರದೇಶದಲ್ಲಿ ಬೆಳೆಯುವ ಬೆಳೆಗೆ ಮಳೆಯನ್ನು ಆಶ್ರಯಿಸಬೇಕಾಗಿದೆ ಎಂದು ಅವರು ಮಾಹಿತಿ ಒದಗಿಸಿದ್ದಾರೆ.
ಈ ಸಾಲಿನಲ್ಲಿ ಇದುವರೆಗೆ ಸರಾಸರಿ ೩೬೦ ಮಿ.ಮೀ. ಮಳೆ ಸುರಿದಿದ್ದು ಕಳೆದ ಬಾರಿಗಿಂತ ೨೦೦ ಮಿ.ಮೀ. ಪ್ರಮಾಣದ ಮಳೆ ಕಡಿಮೆ ಆಗಿರೋದು ದಾಖಲೆ ಗಳಲ್ಲಿ ಕಂಡು ಬಂದಿದೆ. ಈ ಕಾರಣದಿಂದ ಹೆಬ್ಬಾಲೆ ಮತ್ತು ಇತರ ವ್ಯಾಪ್ತಿಯಲ್ಲಿ ಶುಂಠಿ ಬೆಳೆಗೆ ಕಳೆದ ಎರಡು ದಿನಗಳಿಂದ ಕೊಳವೆ ಬಾವಿಗಳಿಂದ ನೀರು ಹಾಯಿಸುತ್ತಿರುವ ದೃಶ್ಯವೂ ಗೋಚರಿಸಿದೆ. -ವನಿತ ಚಂದ್ರಮೋಹನ್