*ಸಿದ್ದಾಪುರ, ಜು. ೧೩: ಭತ್ತದ ಕಣಜವೆಂದೇ ಖ್ಯಾತಿ ಗಳಿಸಿದ್ದ ಕಾವೇರಿನಾಡು ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಬಿತ್ತನೆ ಕಾರ್ಯ ಮಾಡಲಾಗದೆ ರೈತರು ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಉತ್ತಮ ಮಳೆಗಾಗಿ ಎದುರು ನೋಡುತ್ತಿರುವ ಕೃಷಿಕ ವರ್ಗ ಆತಂಕವನ್ನು ಎದುರಿಸುತ್ತಿದೆ.
ವಾಡಿಕೆಯಂತೆ ಈವೇಳೆಗೆ ಉತ್ತಮ ಮಳೆಯಾಗಿ ಭತ್ತದ ಗದ್ದೆಗಳಲ್ಲಿ ಬಿತ್ತನೆ ಕಾರ್ಯ ಆರಂಭಗೊಳ್ಳಬೇಕಾಗಿತ್ತು. ಆದರೆ ಮಳೆ ಮತ್ತೆ ಮರೆಯಾಗಿದೆ. ಇದು ರೈತರನ್ನು ಆತಂಕಕ್ಕೆ ದೂಡಿದೆ. ಭತ್ತದ ಕಣಜವೆಂದೇ ಜನಜನಿತವಾಗಿದ್ದ ಕೊಡಗು ಜಿಲ್ಲೆ ಇಂದು ಗದ್ದೆಗಳನ್ನು ಕಳೆದುಕೊಳ್ಳುತ್ತಿದೆ. ಹವಾಗುಣದ ವೈಪರಿತ್ಯ, ಅಧಿಕ ವೆಚ್ಚದ ನಿರ್ವಹಣೆ, ಕೃಷಿ ಬಗ್ಗೆ ಯುವ ಸಮೂಹದ ನಿರಾಸಕ್ತಿ ಮತ್ತು ವನ್ಯಜೀವಿಗಳ ಉಪಟಳದಿಂದ ಬೇಸತ್ತಿರುವ ಕೃಷಿಕ ಭತ್ತದ ಕೃಷಿಯಿಂದ ದೂರ ಸರಿಯುತ್ತಿದ್ದಾನೆ.
ಆದರೆ ಉಳಿದಿರುವ ಗದ್ದೆಗಳಾದರೂ ಹಸನಾಗಬಹುದು ಎನ್ನುವ ಕೃಷಿ ಕ್ಷೇತ್ರದ ಲೆಕ್ಕಾಚಾರಗಳು ವರ್ಷದಿಂದ ವರ್ಷಕ್ಕೆ ತಲೆ ಕೆಳಗಾಗುತ್ತಿದೆ. ಮಳೆಯ ಕೊರತೆ, ಅತಿವೃಷ್ಟಿ ಅಥವಾ ವನ್ಯಜೀವಿಗಳ ದಾಳಿಯಿಂದ ಭತ್ತದ ಕೃಷಿಗೆ ಹಿನ್ನಡೆಯಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜನವರಿಯಿಂದ ಜುಲೈ ೧೨ ರವರೆಗೆ ೫೬ ಇಂಚು ಮಳೆಯಾಗಿತ್ತು. ಆದರೆ ಈ ವರ್ಷ ಕೇವಲ ೩೨ ಇಂಚು ಮಳೆಯಾಗಿದ್ದು, ೨೪ ಇಂಚಿನಷ್ಟು ಮಳೆಯ ಕೊರತೆ ಎದುರಾಗಿದೆ. ಕೃಷಿ ಕಾರ್ಯ ಮತ್ತು ಕುಡಿಯಲು ಕೊಡಗಿನ ಕಾವೇರಿ ನದಿಯನ್ನೇ ಅವಲಂಬಿಸಿರುವ ಹೊರ ಜಿಲ್ಲೆಯ ಜನರೂ ಕೊಡಗಿನಲ್ಲಿ ಮಳೆಯಾಗದೇ ಇರುವುದನ್ನು ಕಂಡು ಆತಂಕಗೊAಡಿದ್ದಾರೆ.
ಜಿಲ್ಲೆಯ ಬಹುತೇಕ ಗದ್ದೆಗಳು ಭತ್ತದ ಬಿತ್ತನೆಗಾಗಿ ಎದುರು ನೋಡುತ್ತಿವೆ, ಕೆಲವು ರೈತರು ಕೆರೆಗಳಿಂದ ನೀರು ಹಾಯಿಸಿ ಬಿತ್ತನೆ ಕಾರ್ಯ ಮಾಡುವ ಪ್ರಯತ್ನ ಮಾಡುತ್ತಿದ್ದಾರೆಯಾದರೂ ಮಳೆ ಕೈಕೊಟ್ಟರೆ ನಾಟಿ ಕಾರ್ಯ ಅಸಾಧ್ಯ, ಇದರಿಂದ ನಷ್ಟವೇ ಹೆಚ್ಚು ಎಂದು ಕೃಷಿ ಮಾಡದೆ ಸುಮ್ಮನಿದ್ದಾರೆ. ಹವಾಗುಣದಲ್ಲಾಗುತ್ತಿರುವ ಏರುಪೇರಿನಿಂದಾಗಿ ಭತ್ತದ ಕೃಷಿಕ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಭತ್ತದ ಕೃಷಿಯೊಂದಿಗೆ ಕಾಫಿ, ಕರಿಮೆಣಸು, ಏಲಕ್ಕಿ ಮತ್ತಿತರ ಬೆಳೆಗಳಿಗೂ ಮಳೆಯ ಕಣ್ಣಾಮುಚ್ಚಾಲೆ ಹಾನಿಯನ್ನುಂಟು ಮಾಡಿದೆ.
ಒಂದೆಡೆ ಮಳೆಯ ಅನಿಶ್ಚಿತತೆ, ಮತ್ತೊಂದೆಡೆ ಕಾಡಾನೆಗಳ ದಾಳಿಯಿಂದ ಬೇಸತ್ತಿರುವ ಕೊಡಗಿನ ಕೃಷಿಕರು ಕೃಷಿ ಕ್ಷೇತ್ರದಿಂದ ದೂರು ಉಳಿಯುವ ಚಿಂತನೆಯಲ್ಲಿ ತೊಡಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
- ಅಂಚೆಮನೆ ಸುಧಿ