ಕೊಡಗಿನ ಗಡಿಯಾಚೆ

ಮೋದಿ ಭರವಸೆ ಬಗ್ಗೆ ಸದನದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಜಟಾಪಟಿ

ಬೆಂಗಳೂರು, ಜು. ೧೩: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ ೧೫ ಲಕ್ಷ ರೂಪಾಯಿ ಜಮಾ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂಬ ವಿಚಾರಕ್ಕೆ ಸಂಬAಧಿಸಿದAತೆ ಗುರುವಾರ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಮೋದಿ ಭರವಸೆ ಬಗ್ಗೆ ಪುರಾವೆ ನೀಡುವಂತೆ ವಿಪಕ್ಷ ಬಿಜೆಪಿ ಒತ್ತಾಯಿಸಿದೆ. ಇಂದು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಶಾಸಕ ಕೋನರೆಡ್ಡಿ ಅವರು, ನಮ್ಮ ಸರ್ಕಾರ ಅದನ್ನು ಈಡೇರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ನಮ್ಮ ಭರವಸೆಗಳಿಗೆ ನಾವು ಬದ್ಧರಾಗಿದ್ದೇವೆ. ಆದರೆ ನೀವು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ೧೫ ಲಕ್ಷ ರೂ.ಗಳನ್ನು ಜಮಾ ಮಾಡುವ ಭರವಸೆ ನೀಡಿದ್ದೀರಿ. ಆದರೆ ಒಂದೇ ಒಂದು ಬ್ಯಾಂಕ್ ಖಾತೆಗೂ ಹಣ ಜಮೆ ಮಾಡಿಲ್ಲ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್, ಪ್ರತಿ ಬ್ಯಾಂಕ್ ಖಾತೆಗೆ ರೂ. ೧೫ ಲಕ್ಷ ಜಮಾ ಮಾಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂಬುದಕ್ಕೆ ಕನಿಷ್ಟ ಒಂದು ಸಾಕ್ಷö್ಯ ಅಥವಾ ವೀಡಿಯೋ ತುಣುಕನ್ನಾದರು ನೀಡುವಂತೆ ಕೋನರೆಡ್ಡಿ ಅವರಿಗೆ ಒತ್ತಾಯಿಸಿದರು. ಪ್ರಧಾನಿ ಇಂತಹ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಪದೇ ಪದೇ ಪ್ರತಿಪಾದಿಸುತ್ತಿದ್ದರೂ, ಬಿಜೆಪಿ ಸದಸ್ಯರು ಸಾಕ್ಷ್ಯಕ್ಕಾಗಿ ಒತ್ತಾಯಿಸುವುದನ್ನು ಮುಂದುವರಿಸಿದ್ದರಿAದ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು.

ಮೋದಿ ಮಾತು ಕೇಳಿದ್ದರೆ ೫ ವರ್ಷ ನಾನೇ ಸಿಎಂ ಆಗಿರುತ್ತಿದ್ದೆ: ಕುಮಾರಸ್ವಾಮಿ

ಬೆಂಗಳೂರು, ಜು. ೧೩: ಅಂದು ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಕೇಳಿದ್ದರೆ ೫ ವರ್ಷ ನಾನೇ ರಾಜ್ಯದ ಮುಖ್ಯಮಂತ್ರಿಯಾಗಿ ಇರುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ವಿಧಾನಸಭೆಯಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇಂದು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ಸಿದ್ದರಾಮಯ್ಯ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಆಪರೇಷನ್ ಕಮಲದ ಪ್ರಸ್ತಾಪವಾಯಿತು. ಅಷ್ಟರಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಕುಮಾರಸ್ವಾಮಿ, ಆಪರೇಷನ್ ಕಮಲ ಎಂಬುದು ಇತ್ತು. ಆದರೆ ಮಾಧ್ಯಮಗಳಲ್ಲಿ ಕಳೆದ ಕೆಲವು ದಿನಗಳಿಂದ ಆಪರೇಷನ್ ಹಸ್ತ ಎಂಬ ಸುದ್ದಿ ಬರುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಏಕೆ ಅವರ ಜೊತೆ ಸೇರಿಕೊಂಡಿದ್ದೀರಿ ಎಂದು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು. ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರು ೨೦೧೯ರಲ್ಲಿ ನನ್ನ ಜೊತೆ ಒಂದೂವರೆ ಗಂಟೆ ಚರ್ಚೆ ಮಾಡಿದ್ದರು. ಅವರ ಮಾತು ಕೇಳಿದ್ದರೆ ಐದು ವರ್ಷ ಸಿಎಂ ಆಗಿರುತ್ತಿದ್ದೆ ಎಂದು ಹೇಳಿದರು. ಪದೇ ಪದೇ ಬಿಜೆಪಿಯ ಬಿ ಟೀಂ ಎಂದು ಜೆಡಿಎಸ್ ಅನ್ನು ಟೀಕಿಸುವ ಮುನ್ನ ಈ ವಿಚಾರ ತಿಳಿದುಕೊಳ್ಳಿ. ಕಾಂಗ್ರೆಸ್ ಜೊತೆಗೆ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಕರೆದು ಒಂದೂವರೆ ಗಂಟೆಗಳ ಕಾಲ ಚರ್ಚಿಸಿದ್ದರು. ಮುಂದಿನ ನಾಲ್ಕು ವರ್ಷ ಯಾವುದೇ ಸಮಸ್ಯೆ ಇರೊಲ್ಲ, ಸರ್ಕಾರಕ್ಕೆ ಬೆಂಬಲ ಕೊಡುತ್ತೇವೆ ಎಂದು ಆಹ್ವಾನ ನೀಡಿದ್ದರು. ಅವರ ಮಾತು ಕೇಳಿದ್ದರೆ ಕಳೆದ ಐದು ವರ್ಷಗಳ ಪೂರ್ಣ ಅವಧಿಗೆ ನಾನೇ ಸಿಎಂ ಆಗಿರುತ್ತಿದ್ದೆ. ಆದರೆ ನಾನು ಅದನ್ನು ತಿರಸ್ಕಾರ ಮಾಡಿದೆ. ಕಪ್ಪು ಚುಕ್ಕೆ ಬರಬಾರದು ಎಂಬ ಕಾರಣಕ್ಕಾಗಿ ಮುಂದುವರಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಯಮುನಾ ನದಿ ಹರಿವು ಹೆಚ್ಚಳ: ೧೨ ಎನ್‌ಡಿಆರ್‌ಎಫ್ ತಂಡ ನಿಯೋಜನೆ

ನವದೆಹಲಿ, ಜು. ೧೩: ದೆಹಲಿಯಲ್ಲಿ ಯಮುನಾ ನದಿಯ ಹರಿವು ಅಪಾಯದ ಮಟ್ಟ ತಲುಪಿರುವ ಹಿನ್ನೆಲೆ ೧೨ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಕೇಂದ್ರ, ಪೂರ್ವ, ಈಶಾನ್ಯ ದೆಹಲಿಗಳಲ್ಲಿ ತಲಾ ೩ ತಂಡಗಳನ್ನು ನಿಯೋಜಿಸಲಾಗಿದ್ದು, ಮತ್ತೊಂದು ತಂಡವನ್ನು ಶಾದರ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ವಕ್ತಾರರು ಹೇಳಿದ್ದಾರೆ. ಪ್ರವಾಹ ಪರಿಸ್ಥಿತಿ ಇರುವ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲು ಜಿಲ್ಲಾಡಳಿತಕ್ಕೆ ಈ ತಂಡಗಳು ಸಹಾಯ ಮಾಡುತ್ತಿವೆ. ಬೋಟ್, ಹಗ್ಗ ಇತರ ಅಗತ್ಯ ಉಪಕರಣಗಳನ್ನು ತಂಡಗಳಿಗೆ ನೀಡಲಾಗಿದೆ. ಬೆಳಿಗ್ಗೆ ೧೦ ಗಂಟೆಗೆ ಯಮುನಾ ನದಿಯ ನೀರು ೨೦೮.೫೩ ಮೀಟರ್‌ಗಳಿಗೆ ತಲುಪಿದ್ದು, ೪೫ ವರ್ಷ ವರ್ಷಗಳ ದಾಖಲೆ ಮುರಿದಿದೆ.

ಸಾಂಬಾರಿಗೆ ಟೊಮೆಟೊ ಹಾಕಿದ್ದಕ್ಕೆ ಸಿಟ್ಟು, ಮಗುವಿನ ಜೊತೆ ಮನೆ ಬಿಟ್ಟ ಪತ್ನಿ

ಭೋಪಾಲ್, ಜು. ೧೩: ತನ್ನನ್ನು ಕೇಳದೇ ಸಾಂಬಾರಿಗೆ ಟೊಮೆಟೊ ಹಾಕಿದ್ದಕ್ಕೇ ಕೋಪಗೊಂಡ ಮಹಿಳೆ ತನ್ನ ಪತಿಯನ್ನು ತೊರೆದು ಮಗುವಿನೊಂದಿಗೆ ಮನೆ ಬಿಟ್ಟು ಹೋದ ಘಟನೆ ನಡೆದಿದೆ. ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಈ ನಡೆದಿದ್ದು ಸದ್ಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇರುವ ಟೊಮೆಟೊವನ್ನು ತನ್ನನ್ನು ಕೇಳದೇ ಸಾಂಬಾರಿನಲ್ಲಿ ಬಳಸಿದಕ್ಕೆ ಗಂಡನ ಜೊತೆ ಜಗಳವಾಡಿದ ಹೆಂಡತಿ ಕೊನೆಗೆ ಮನೆಯನ್ನೇ ತೊರೆದು ಕಾಣೆಯಾಗಿದ್ದಾಳೆ. ಮೂಲಗಳ ಪ್ರಕಾರ ಸಂಜೀವ್ ಬರ್ಮನ್ ದಂಪತಿ ಶಾಹದೋಲ್‌ನಲ್ಲಿ ಸಣ್ಣ ಹೊಟೇಲ್‌ವೊಂದನ್ನು ನಡೆಸುತ್ತಿದ್ದಾರೆ. ಸಂಜೀವ್ ಬರ್ಮನ್ ಇತ್ತೀಚೆಗೆ ಅಡುಗೆ ಮಾಡುವಾಗ ಹೆಂಡತಿಯನ್ನು ಕೇಳದೇ ಎರಡೇ ಎರಡು ಟೊಮೆಟೊ ಹಣ್ಣುಗಳನ್ನು ಬಳಸಿದ್ದಾರೆ. ಇಷ್ಟಕ್ಕೇ ಸಿಟ್ಟಾದ ಪತ್ನಿ ಪತಿಯೊಂದಿಗೆ ಜಗಳ ತೆಗೆದಿದ್ದಾರೆ. ಸಂಜೀವ್ ಹೇಳದೇ ಕೇಳದೆ ಎರಡು ಟೊಮೆಟೊ ಹಣ್ಣುಗಳನ್ನು ಬಳಸಿ ಸಾಂಬಾರು ತಯಾರಿಸಿದ್ದನ್ನು ಕಂಡು ಕೋಪಗೊಂಡ ಪತ್ನಿ ಜಗಳ ಆರಂಭಿಸಿದ್ದಾಳೆ ಎಂದು ಸಂಜೀವ್ ಬರ್ಮನ್ ದೂರು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.