ಪೊನ್ನಂಪೇಟೆ, ಜು. ೧೨: ಗೋಣಿ ಕೊಪ್ಪಲು ಕಾವೇರಿ ಎಜುಕೇಶನ್ ಸೊಸೈಟಿಯ ಸ್ಥಾಪಕ ಸದಸ್ಯರಾದ ಶತಾಯುಷಿ ಬುಟ್ಟಿಯಂಡ ಅಪ್ಪಾಜಿ ಅವರನ್ನು ವೀರಾಜಪೇಟೆ ಕಾವೇರಿ ಕಾಲೇಜು ವತಿಯಿಂದ ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಪ್ಪಾಜಿ ಅವರು, ಅಂದಿನ ಶಿಕ್ಷಣ ಪ್ರೇಮಿಗಳ ಅವಿರತ ಪ್ರಯತ್ನದ ಫಲವಾಗಿ ಸ್ಥಾಪನೆಯಾದ ಗೋಣಿಕೊಪ್ಪಲು ಮತ್ತು ವೀರಾಜ ಪೇಟೆ ಕಾವೇರಿ ಕಾಲೇಜು ದಕ್ಷಿಣ ಕೊಡಗಿನ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಪಾಲಿನ ಆಶಾಕಿರಣ ವಾಗಿದ್ದು, ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಯಶಸ್ಸು ಸಾಧಿಸಿರುವುದು ಖುಷಿ ತಂದಿದೆ. ಕಾವೇರಿ ಕಾಲೇಜು ಮುಂದಕ್ಕೂ ಕೂಡ ಯಶಸ್ಸಿನ ಹಾದಿ ಯಲ್ಲಿ ಸಾಗಲಿ ಎಂದು ಶುಭ ಹಾರೈಸಿ ದರು. ಈ ಸಂದರ್ಭ ಗೋಣಿಕೊಪ್ಪಲು ಕಾವೇರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಪ್ರೊ. ಇಟ್ಟೀರ ಕೆ. ಬಿದ್ದಪ್ಪ, ಕಾರ್ಯದರ್ಶಿ ಕುಲ್ಲಚಂಡ ಪಿ. ಬೋಪಣ್ಣ, ನಿವೃತ್ತ ಪ್ರಾಂಶುಪಾಲೆ ಪ್ರೊ. ಎ.ಎಂ. ಕಮಲಾಕ್ಷಿ, ವೀರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಆನಂದ ಕಾರ್ಲ, ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ಕೆ.ಜಿ. ವೀಣಾ, ಅಪ್ಪಾಜಿ ಅವರ ಮಕ್ಕಳಾದ ಬುಟ್ಟಿಯಂಡ ಚಂಗಪ್ಪ, ಧನ್ಯ ಸುಬ್ಬಯ್ಯ ಇನ್ನಿತರರು ಇದ್ದರು.