ಪೊನ್ನAಪೇಟೆ, ಜು. ೧೧: ಪೊನ್ನಂಪೇಟೆ ತಾಲೂಕಿನ ಬೆಕ್ಕೆಸೊಡ್ಲೂರು, ಬೆಸಗೂರು, ಬಲ್ಯಮಂಡೂರು, ನಿಡುಗುಂಬ ವ್ಯಾಪ್ತಿಯ ಒಂಟಿ ಮನೆಗಳಿಗೆ ನುಗ್ಗಿ ಕಳ್ಳತನ ಪ್ರಕರಣಗಳಿಗೆ ಸಂಬAಧಿಸಿ ದಂತೆ ಆರೋಪಿ ಅಪ್ರಾಪ್ತ ಬಾಲಕ ನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ನಿಡುಗುಂಬ ಗ್ರಾಮದಲ್ಲಿ ಒಂದು ಲ್ಯಾಪ್ಟಾಪ್, ೪ ಮೊಬೈಲ್ಗಳನ್ನು ಕಳ್ಳತನ ಮಾಡಿದ್ದ ಈತ ತಾ.೨ ರಂದು ರಾತ್ರಿ ಬೆಕ್ಕೆಸೊಡ್ಲೂರು ಗ್ರಾಮದ ಸುಳ್ಳಿಮಾಡ ಗಂಗಮ್ಮ ಎಂಬವರ ಮನೆಯ ಬಾಗಿಲು ಮುರಿದು ಒಳ ನುಗ್ಗುಲು ಪ್ರಯತ್ನಿಸುತ್ತಿದ್ದ ಸಂದರ್ಭ ಮನೆಯಲ್ಲಿ ಒಂಟಿಯಾಗಿದ್ದ ಗಂಗಮ್ಮ ಅವರು ಸಮಯ ಪ್ರಜ್ಞೆ ಪ್ರದರ್ಶಿಸಿ ತಮ್ಮ ಮಗನಿಗೆ ಹೇಳುವಂತೆ
(ಮೊದಲ ಪುಟದಿಂದ) "ಕೋವಿಯಿಂದ ಗುಂಡು ಹಾರಿಸು" ಎಂದು ಜೋರಾಗಿ ಬೊಬ್ಬೆ ಹಾಕಿದ್ದನ್ನು ಕೇಳಿಸಿಕೊಂಡು ಹೆದರಿ ಸ್ಥಳದಿಂದ ಪರಾರಿಯಾಗಿದ್ದ.
ಅದೇ ದಿನ ಬೆಕ್ಕೆಸೊಡ್ಲೂರಿನ ಕೆನರಾ ಬ್ಯಾಂಕ್ ಶಾಖೆಯ ಕಿಟಕಿಯನ್ನು ಒಡೆದು ಹಾಕಿ, ೩ ಸಿಸಿ ಕ್ಯಾಮೆರಗಳನ್ನು ಕಳ್ಳತನ ಮಾಡಿದ್ದ, ಮತ್ತೊಂದು ಸಿಸಿ ಕ್ಯಾಮೆರದಲ್ಲಿ ಕಳ್ಳನ ಚಿತ್ರ ಸೆರೆಯಾಗಿತ್ತು. ಇದನ್ನು ಆಧರಿಸಿ ಕಳ್ಳನ ಪತ್ತೆಗಾಗಿ ಪೊನ್ನಂಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದರು.
ತಾ.೪ ರಂದು ಬೆಕ್ಕೆಸೊಡ್ಲೂರು ಗ್ರಾಮದ ಸುಳ್ಳಿಮಾಡ ಪುಷ್ಯ ಮುದ್ದಪ್ಪ ಎಂಬವರ ಮನೆಯ ಸದಸ್ಯರು ಕಾರ್ಯ ನಿಮಿತ್ತ ಮೈಸೂರಿಗೆ ತೆರಳಿದ್ದ ಸಂದರ್ಭ ರಾತ್ರಿ ಮನೆಯ ಮುಂಬಾಗಿಲಿನ ಬೀಗ ಮುರಿದು ಒಳಗೆ ನುಗ್ಗಿದ ಬಾಲಕ ಮನೆಯಲ್ಲಿದ್ದ ಬೀರು ತೆರೆದು ಶೋಧ ನಡೆಸಿ, ಬೀರುವಿನಲ್ಲಿದ್ದ ಬಟ್ಟೆಗಳನ್ನು ಎಳೆದು ಚಲ್ಲಾಪಿಲ್ಲಿ ಮಾಡಿ, ಯಾವುದೇ ಅಮೂಲ್ಯ ವಸ್ತುಗಳು ಸಿಗದ ಕಾರಣ ರೇಡಿಯೋ, ಕಂಬಳಿ, ಒಂದು ಅಲ್ಯುಮಿನಿಯಂ ಪಾತ್ರೆಯನ್ನು ಕಳವು ಮಾಡಿ, ಮನೆಯ ಅಡುಗೆ ಕೋಣೆಗೆ ತೆರಳಿ ಅಲ್ಲಿಯೇ ಅನ್ನ ಬೇಯಿಸಿ, ಮೊಟ್ಟೆ ಸಾಂಬಾರ್ ಮಾಡಿ ಹೊಟ್ಟೆ ತುಂಬಾ ಊಟ ಮಾಡಿ, ಮನೆಯಲ್ಲಿಯೇ ನಿದ್ರೆ ಮಾಡಿ ಬೆಳಗಿನ ಜಾವ ಸ್ಥಳದಿಂದ ಕಾಲ್ಕಿತ್ತಿದ್ದ.
ಅಲ್ಲದೆ ಬೆಕ್ಕೆಸೊಡ್ಲೂರು ದೇವಸ್ಥಾನದ ಹುಂಡಿಯನ್ನು ಮುರಿಯುವ ಪ್ರಯತ್ನ ಮಾಡಿದ್ದ. ಈ ಎಲ್ಲಾ ಘಟನೆಗಳ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕತ್ತಿಯನ್ನು ಹಿಡಿದುಕೊಂಡು ಸುತ್ತಾಡುತ್ತಿದ್ದ ಈತ ಹಗಲು ಹೊತ್ತು ತಾನು ಕಳ್ಳತನ ಮಾಡಬೇಕಾದ ಮನೆಯನ್ನು ಗುರುತು ಮಾಡಿಕೊಂಡು ರಾತ್ರಿ ಕಳ್ಳತನ ನಡೆಸುತ್ತಿದ್ದ. ಬೆಸಗೂರು ಗ್ರಾಮದ ತೋಟದ ಲೈನ್ ಮನೆಯೊಂದರಲ್ಲಿ ವಾಸವಾಗಿದ್ದ ಈತ, ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಬೀಳದ ರೀತಿಯಲ್ಲಿ, ಯಾವಾಗಲು ತೋಟ ಹಾಗೂ ಹೊಳೆಬದಿ ಕಾಡಿನಲ್ಲೇ ಕಾಲ ಕಳೆಯುತ್ತಿದ್ದ, ರಾತ್ರಿ ಯಾವುದಾದರು ಶಾಲೆಯಲ್ಲಿ ಮಲಗುತ್ತಿದ್ದ ಎನ್ನಲಾಗಿದೆ. ಮನೆಗಳಿಗೆ ನುಗ್ಗಿದ ಸಂದರ್ಭ ಬಟ್ಟೆಗಳನ್ನು ಕದ್ದು, ಅದೇ ಬಟ್ಟೆಯನ್ನು ಧರಿಸಿ ಓಡಾಡುತ್ತಿದ್ದ.
ತಾ.೧೦ ರಂದು ಗೋಣಿಕೊಪ್ಪಲು ಕಡೆಯಿಂದ ಖಾಸಗಿ ಬಸ್ಸಿನಲ್ಲಿ ಕಾನೂರು ಕಡೆಗೆ ಪ್ರಯಾಣಿಸುತ್ತಿದ್ದಾಗ, ಖಚಿತ ಮಾಹಿತಿಯನ್ನಾಧರಿಸಿ ಜೋಡುಬೀಟಿ ಬಳಿ ಬಸ್ಸನ್ನು ನಿಲ್ಲಿಸಿದ ಪೊಲೀಸರು, ಬಾಲಕನನ್ನು ಬಂಧಿಸಿ ದ್ದಾರೆ. ಆರೋಪಿ ಅಪ್ರಾಪ್ತನಾಗಿರುವ ಕಾರಣ, ಆತನನ್ನು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ.
ಕೊಡಗು ಎಸ್.ಪಿ ರಾಮರಾಜನ್ ಮತ್ತು ಅಡಿಷನಲ್ ಎಸ್ಪಿ ಸುಂದರ್ ರಾಜ್ ಅವರ ನಿರ್ದೇಶನದ ಮೇರೆಗೆ, ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್, ಗೋಣಿಕೊಪ್ಪ ಸರ್ಕಲ್ ಇನ್ಸ್ಪೆಕ್ಟರ್ ಗೋವಿಂದರಾಜು, ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ಲಕ್ಷö್ಮಣ್ ಕಾಮಣ್ಣವರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕ್ರೆöÊಂ ಸಬ್ ಇನ್ಸ್ಪೆಕ್ಟರ್ ಸುಬ್ರಮಣಿ, ಎಎಸ್ಐ ವೆಂಕಟೇಶ್ ಸಿಬ್ಬಂದಿಗಳಾದ ಮಹದೇಶ್ವರ ಸ್ವಾಮಿ, ಪ್ರವೀಣ್, ಶೋಭಾ, ಪ್ರಮೀಳ, ಹರೀಶ್, ಸಂತೋಷ್, ಮುತ್ತುರಾಜ್ ಇನ್ನಿತರರು ಭಾಗವಹಿಸಿದ್ದರು.
ಕಳೆದ ವರ್ಷಕೂಡ ಈ ಬಾಲಕ ಕಳ್ಳತನ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದು, ರಿಮ್ಯಾಂಡ್ ಹೋಮ್ ನಲ್ಲಿ ಶಿಕ್ಷೆ ಅನುಭವಿಸಿ ಬಂದು, ಮತ್ತೆ ಕಳ್ಳತನದ ಕಾಯಕ ಶುರು ಮಾಡಿಕೊಂಡಿದ್ದ. - ಚನ್ನನಾಯಕ