ಮಡಿಕೇರಿ, ಜು. ೧೧: ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎಸ್.ಸಿ. ಸತೀಶ್ ಅವಿರೋಧವಾಗಿ ಆಯ್ಕೆಯಾದರು.
ನಗರಸಭೆ ಸಭಾಂಗಣದಲ್ಲಿ ಸ್ಥಾಯಿ ಸಮಿತಿ ಸದಸ್ಯರ ಮೂಲಕ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ೧೧ ಸ್ಥಾಯಿ ಸಮಿತಿ ಸದಸ್ಯರ ಪೈಕಿ ಕಾಳಚಂಡ ಅಪ್ಪಣ್ಣ ಹಾಗೂ ಕಲಾವತಿ ಗೈರಾಗಿದ್ದರು. ಸ್ಥಾನಕ್ಕೆ ಯಾರು ಸ್ಪರ್ಧಿಸದ ಹಿನ್ನೆಲೆ ಸತೀಶ್ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.
ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಎಸ್.ಸಿ. ಸತೀಶ್, ೧ ವರ್ಷದ ಅವಧಿಯಲ್ಲಿ ಶಕ್ತಿಮೀರಿ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸದಸ್ಯರು ಕೂಡ ನಗರದ ಸಮಸ್ಯೆಗಳನ್ನು ತಿಳಿಸಬೇಕು. ಎಲ್ಲರ ಸಹಕಾರದಿಂದ ಉತ್ತಮವಾಗಿ ಕೆಲಸ ಮಾಡಲಾಗುತ್ತದೆ.
(ಮೊದಲ ಪುಟದಿಂದ) ರಾಜಕೀಯ ಬದಿಗೊತ್ತಿ ಸೌಹಾರ್ದತೆಯಿಂದ ಮುನ್ನಡೆಯೋಣ ಎಂದು ಹೇಳಿದರು. ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮನ್ವಯತೆಯಿಂದ ಕೆಲಸ ಮಾಡಿದರೆ ನಗರದ ಅಭಿವೃದ್ಧಿಗೆ ಪೂರಕವಾಗುತ್ತದೆ. ಸ್ಥಾಯಿ ಸಮಿತಿ ಕಾರ್ಯವ್ಯಾಪ್ತಿ ಅರಿತು ಮುನ್ನಡೆಯಬೇಕೆಂದು ಅಭಿಪ್ರಾಯಿಸಿದರು.
ಉಪಾಧ್ಯಕ್ಷೆ ಸವಿತಾ ರಾಕೇಶ್ ಮಾತನಾಡಿ, ಎಲ್ಲರ ವಿಶ್ವಾಸವನ್ನು ಪಡೆದುಕೊಂಡು ಸ್ಥಾಯಿ ಸಮಿತಿ ಮುನ್ನಡೆಯಬೇಕೆಂದು ಸಲಹೆ ನೀಡಿದರು.
ಸದಸ್ಯ ರಾಜೇಶ್ ಯಲ್ಲಪ್ಪ ಮಾತನಾಡಿ, ಈ ಹಿಂದಿನ ಸ್ಥಾಯಿ ಸಮಿತಿಯಲ್ಲಿ ವಿಪಕ್ಷಗಳಿಗೆ ಸ್ಥಾನ ದೊರೆತಿರಲಿಲ್ಲ. ತಾರತಮ್ಯ ನೀತಿಯೂ ಇತ್ತು. ಹೊಸ ಸಮಿತಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ. ಎಲ್ಲಾ ಸದಸ್ಯರನ್ನು ಸಮಾನವಾಗಿ ಕಾಣಬೇಕು. ಎಲ್ಲಾ ವಾರ್ಡ್ಗಳ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಸದಸ್ಯ ಕೆ.ಎಸ್. ರಮೇಶ್ ಮಾತನಾಡಿ, ಆಡಳಿತ ಮಂಡಳಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಸಮನ್ವಯತೆಯಿಂದ ಇರಬೇಕು. ಇದರಿಂದ ನಗರದ ಅಭಿವೃದ್ಧಿಗೆ ಲಾಭವಾಗುತ್ತದೆ. ಅಧಿಕಾರಿಗಳ ಮಾರ್ಗದರ್ಶವನ್ನು ಅಧ್ಯಕ್ಷರು ಪಡೆದುಕೊಳ್ಳಬೇಕು. ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗೆಲ್ಲುವ ತನಕ ಮಾತ್ರ ರಾಜಕಾರಣ ಇರಬೇಕು. ನಂತರ ಎಲ್ಲರೂ ಒಂದಾಗಿ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಇರುವ ಕಾರ್ಯವ್ಯಾಪ್ತಿಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಬೇಕು. ನಗರ ಪ್ರದಕ್ಷಿಣೆ ಮೂಲಕ ನಗರದ ನೈಜ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳುವಂತೆ ತಿಳಿಸಿದರು.
ಕಂದಾಯಾಧಿಕಾರಿ ತಾಹೀರ್ ಮಾತನಾಡಿ, ೨೬೩ ಸಿಬ್ಬಂದಿಗಳಿರ ಬೇಕಾದ ನಗರಸಭೆಯಲ್ಲಿ ಕೇವಲ ೬೩ ಸಿಬ್ಬಂದಿಗಳಿದ್ದಾರೆ. ಸವಾಲಿನ ನಡುವೆ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದನ್ನು ಅರಿತು ಸದಸ್ಯರು ಸಿಬ್ಬಂದಿಗಳಿಗೆ ಸಹಕಾರ ನೀಡಬೇಕು. ಕಾನೂನು ವ್ಯಾಪ್ತಿಯಲ್ಲಿ ಆಗಬೇಕಾದ ಕೆಲಸಗಳನ್ನು ತ್ವರಿತವಾಗಿ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭ ಸದಸ್ಯರುಗಳಾದ ಶಾರದಾ ನಾಗರಾಜು, ಚಿತ್ರಾವತಿ, ಸಬಿತಾ, ಉಷಾಕುಮಾರಿ, ಎಂ.ಎ. ಮುಸ್ತಾಫ, ಚಂದ್ರಶೇಖರ್ ಹಾಜರಿದ್ದರು.